ಮೈಸೂರು: ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವರೇ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರಾಜಾರೋಷವಾಗಿ ತಿರುಗಿ ಬಿದ್ದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಮರ ಸಾಗಿಸುತ್ತಿದ್ದ ಲಾರಿಯನ್ನು ಹಿಡಿದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಮಾರಾಟಗಾರರು, ಅರಣ್ಯ ಇಲಾಖೆಯ ಕಚೇರಿ ಬಾಗಿಲು ಬಡಿದು ದಾದಾಗಿರಿ ನಡೆಸಿದ್ದಾರೆ. ಅಲ್ಲದೆ ಮರ ಹಿಡಿದ ಅಧಿಕಾರಿಗಳ ಜೊತೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಜಮೀನುಗಳಲ್ಲಿ ಬೆಳೆದಿರುವ ಮರಗಳನ್ನು ಕಡಿಯಬೇಕಿದ್ದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಅನುಮತಿ ಪಡೆಯದೇ ಮರಗಳನ್ನ ಕಡಿದು ಅರಣ್ಯ ಇಲಾಖೆ ಕಚೇರಿ ಮುಂಭಾಗವೇ ರಾಜಾರೋಷವಾಗಿ ಸಾಗಿಸುತ್ತಿದ್ದಾಗ, ಅಧಿಕಾರಿಗಳು ಲಾರಿ ಸಮೇತ ಹಿಡಿದು ಜಪ್ತಿ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಮಾರಾಟಗಾರರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಾರಾಟಗಾರರ ಆಕ್ರೋಶಕ್ಕೆ ಹೆದರಿದ ಅಧಿಕಾರಿಗಳು, ಕಚೇರಿಯ ಒಳಗೆ ಸೇರಿ ಬಾಗಿಲು ಭದ್ರಪಡಿಸಿಕೊಂಡು ಕುಳಿತಿದ್ದಾರೆ. ಮಾರಾಟಗಾರರು ಕಚೇರಿ ಬಾಗಿಲು ಬಡಿದು ರಾದ್ದಾಂತ ನಡೆಸಿದ್ದು, ಮಾಹಿತಿ ಅರಿತು ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.