– ಶಸ್ತ್ರ ಚಿಕಿತ್ಸೆಗೆ ಬಳಸುವ ದಾರ ತಯಾರಿಸುವ ಫ್ಯಾಕ್ಟರಿಯ ನೈಜ ಚಿತ್ರಣ
– ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ದಂಧೆ ಬಯಲು
ಬೆಂಗಳೂರು: ಸಿಲಿಕಾನ್ ಸಿಟಿಯ ಅಂದ್ರಳ್ಳಿಯಲ್ಲಿ ನಡೆಯುತ್ತಿರುವ ಆಪರೇಷನ್‍ಗೆ ಬಳಸೋ ದಾರದ ಭಯಾನಕ ದಂಧೆ ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಅಂದ್ರಳ್ಳಿಯ ಕಾಡು ದಾರಿ ರೀತಿ ಕಾಣುವ ಮಾರ್ಗದಲ್ಲಿ ಒಂದು ಫ್ಯಾಕ್ಟರಿ ಇದೆ. ಈ ಫ್ಯಾಕ್ಟರಿಯಲ್ಲಿ ಆಪರೇಷನ್‍ಗೆ ಬಳಸುವ ದಾರವನ್ನು ತಯಾರಿಸಲಾಗುತ್ತದೆ. ಇದರ ಕರಾಳ ಮುಖವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿ ಬಟಾಬಯಲು ಮಾಡಿದೆ.
Advertisement
Advertisement
ಈ ಫ್ಯಾಕ್ಟರಿ ಹತ್ತಿರ ಹೋದರೆ ಸತ್ತ ಹೆಣದ ವಾಸನೆ ಮೂಗಿಗೆ ಅಪ್ಪಳಿಸುತ್ತೆ. ಕೇವಲ 30-40 ಸೈಟಲ್ಲಿ ಕಟ್ಟಿಕೊಂಡಿರುವ ಈ ಗೋಡನ್ ಒಳಗೆ ಹೋದರೆ ಕಾಣಸಿಗೋದು ಉತ್ತರ ಭಾರತದ ಕೆಲಸಗಾರರು, ಕೊಳಕು ಕೊಳಕಾದ ನೀಲಿ ಬಣ್ಣದ ಡ್ರಂಗಳು. ಇವೆಲ್ಲದರ ನಡುವೆಯೇ ಇಲ್ಲಿರುವ ಕೆಲಸಗಾರರು ದಾರಗಳ ಗೊಂಚಲಲ್ಲಿ ಒಂದೊಂದೆ ದಾರವನ್ನ ಎಳೆದು ಹಾಕುತ್ತಿದ್ದರು. ಈ ದಾರಗಳು ವೈದ್ಯರು ಆಪರೇಷನ್ ಮಾಡುವಾಗ ಹೊಲಿಗೆ ಹಾಕಲು ಬಳಸುವ ದಾರಗಳಿದ್ದು, ಇದು ತಯಾರಾಗುವ ಪರಿ ನಿಜಕ್ಕೂ ಭಯಾನಕವಾಗಿದೆ.
Advertisement
ಕೊಳಕು ಫ್ಯಾಕ್ಟರಿಯಲ್ಲಿ ದಾರಗಳನ್ನು ಕುರಿ, ಮೇಕೆಗಳ ಕರುಳಿನಿಂದ ತಯಾರಿಸಲಾಗುತ್ತಿದೆ. ಕರುಳಿನಿಂದ ತಯಾರಾದ ದಾರವನ್ನೇ ವೈದರು ಹಿಂದಿನಿಂದಲೂ ರೋಗಿಗೆ ಆಪರೇಷನ್ ಮಾಡಿದ ಬಳಿಕ ಹೊಲಿಗೆ ಹಾಕಲು ಬಳಸುತ್ತಾ ಬಂದಿದ್ದಾರೆ. ಆದರೆ ಇದನ್ನು ತಯಾರು ಮಾಡುವ ಕೆಲಸ ಪ್ರಮಾಣೀಕೃತ ಫಾರ್ಮಾಸಿಗಳು ಮಾತ್ರ ಮಾಡಬೇಕು. ಆದರೆ ಬೆಂಗಳೂರಿನ ಅಂದ್ರಳ್ಳಿಯ ತಯಾರಾಗುತ್ತಿರುವ ಆಪರೇಷನ್ ದಾರದ ಫ್ಯಾಕ್ಟರಿಗೆ ಯಾವುದೇ ಪರವಾನಿಗೆ ಇಲ್ಲ.
Advertisement
ಈ ದಾರಗಳನ್ನು ತಯಾರಿಸುವ ಗೋಡಾನ್ ಒಳಗೆ ಹೋದರೆ ಕೆಲಸಗಾರರು ಕರುಳನ್ನ ಕೈಗಳಲ್ಲಿ ತೊಳೆದು, ಒಂದೊಂದೆ ಏಳೆಯನ್ನ ಬಿಡಿಸುತ್ತಿರುವುದು ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆಪರೇಷನ್ ದಾರಗಳನ್ನು ತಯಾರಿಸುವಾಗ ಇಲ್ಲಿನ ಕೆಲಸಗಾರರು ಸ್ವಚ್ಛತೆ ಮಾಡಲು ಒಂದು ಗ್ಲೌಸ್ ಕೂಡ ಹಾಕಿಕೊಳ್ಳುವುದಿಲ್ಲ. ಅಲ್ಲದೆ ಕೆಲಸಗಾರರನ್ನು ಮಾತನಾಡಿಸಿದಾಗ ಅವರ ಮುಖದಲ್ಲಿನ ಗಾಬರಿಯೇ ಅವರು ಮಾಡುವ ದಂಧೆ ಏನು ಎನ್ನುವುದನ್ನು ಸಾರಿ ಹೇಳುವಂತಿತ್ತು.
ನಮ್ಮ ಪ್ರತಿನಿಧಿ ಕೆಲಸಗಾರೊಬ್ಬರನ್ನು ಪ್ರಶ್ನಿಸಿದಾಗ, ನಾನು ಇಲ್ಲಿ ಕೆಲಸ ಮಾಡ್ತೀನಿ ಓನರ್ ಬಗ್ಗೆ ಗೊತ್ತಿಲ್ಲ ಎಂದರು. ಬಳಿಕ ಇದು ಆಪರೇಷನ್ ಗೆ ಬಳಸುವ ದಾರವೇ ಎಂದು ಕೇಳಿದಾಗ ಮೊದಲು ಹೌದು ಎಂದ ಕೆಲಸ ಮಾಡುತ್ತಿದ್ದ ಮಹಿಳೆ ಬಳಿಕ ಇದು ಆಪರೇಷನ್ ದಾರವಲ್ಲ, ಇದು ಬ್ಯಾಡ್ಮಿಂಟನ್ ನೆಟ್‍ಗೆ ಬಳಸುವ ದಾರ ಎಂದು ವರಸೆ ಬದಲಿಸಿದರು. ಇದು ಕುರಿ ಕರುಳಿನಿಂದ ತಯಾರಾಗುತ್ತೆ. ಪೂರ್ತಿ ಇಲ್ಲೇ ತಯಾರಾಗುವುದಿಲ್ಲ. ನಾವು ದಾರಗಳನ್ನು ಮಾಡಿ ಬೇರೆಯವರಿಗೆ ಕಳುಹಿಸುತ್ತೇವೆ. ಅವರು ಕೆಲಸ ಪೂರ್ತಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಆದರೆ ಇಲ್ಲಿ ಕೆಲಸ ಮಾಡುವ ಇತರೇ ಕೆಲಸಗಾರರು ಇದು ಆಪರೇಷನ್ ದಾರ ಅಂತ ನಿಜ ಬಾಯಿಬಿಟ್ಟಿದ್ದಾರೆ. ಆದರೆ ಮಹಿಳೆ ಮಾತ್ರ ಬ್ಯಾಡ್ಮಿಂಟನ್ ನೆಟ್‍ಗೆ ಬಳಸುವ ದಾರ ಎಂದಿದ್ದಾಳೆ. ಮಹಿಳೆ ಇಲ್ಲಿ ಮಾಡೋ ದಂಧೆಯನ್ನ ಮುಚ್ಚಿಕೊಳ್ಳೊಕೆ ಸರ್ಕಸ್ ಮಾಡಿದ್ದಾಳೆ. ಆದರೆ ಈ ಗೋಡನ್‍ಗೆ ನೀರು ಸರಬರಾಜು ಮಾಡುತ್ತಿದ್ದ ವ್ಯಕ್ತಿ ಪಬ್ಲಿಕ್ ಟಿವಿಗೆ ಇಲ್ಲಿನ ದಂಧೆಯ ಬಗ್ಗೆ ವಿವರಿಸಿದರು.
ನಾನು ಇಲ್ಲಿಗೆ ನೀರು ಸರಬರಾಜು ಮಾಡುತ್ತೇನೆ. ಮೇಕೆ, ಕುರಿ ಕರುಳುಗಳನ್ನು ತಂದು ಆಪರೇಷನ್ ದಾರ ತಯಾರು ಮಾಡುತ್ತಾರೆ. ಇಲ್ಲಿ 15 ರಿಂದ 20 ಜನ ಕೆಲಸ ಮಾಡ್ತಾರೆ. ಕರುಳು ತೊಳೆದ ನೀರನ್ನು ಈ ಹಿಂದೆ ಚರಂಡಿಗೆ ಬಿಡುತ್ತಿದ್ದರು. ಆದ್ದರಿಂದ ಜಿಕೆಡಬ್ಲ್ಯು ಲೇಔಟ್‍ನಲ್ಲಿದ್ದ ಫ್ಯಾಕ್ಟರಿಯನ್ನು ಸ್ಥಳೀಯರು ಗಲಾಟೆ ಮಾಡಿ ಕ್ಲೋಸ್ ಮಾಡಿಸಿದರು. ಮೊದಲು ಈ ದಾರವನ್ನು ಸ್ಯಾಂಟ್ ಫ್ರಾನಿಕ್ ಅನ್ನೊ ಕಂಪನಿ ತಯಾರಿಸುತಿತ್ತು. ಈಗ ಇದು ಯಾವುದು ಎನ್ನುವ ಬಗ್ಗೆ ಗೊತ್ತಿಲ್ಲ. ಇಲ್ಲಿಗೆ ನೀರು ಸರಬರಾಜು ಮಾಡೋವಾಗಲೇ ಇದು ಅಕ್ರಮ ವ್ಯವಹಾರ ಅಂತ ಅನಿಸುತ್ತಿತ್ತು. ಹಾಗೆಯೇ ಇಲ್ಲಿ ಮಹಿಳೆಯರು ಜಾಸ್ತಿ ಕೆಲಸ ಮಾಡುತ್ತಾರೆ ಎಂದು ವ್ಯಕ್ತಿ ದಂಧೆಯ ಬಗ್ಗೆ ಮಾಹಿತಿ ನೀಡಿದರು.
ಈ ರೀತಿ ಯಾವುದೇ ಭಯವಿಲ್ಲದೆ ಆಪರೇಷನ್ ದಾರದ ದಂಧೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಆರೋಗ್ಯ ಇಲಾಖೆಗೆ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಮಾಹಿತಿ ಇಲ್ಲವೇ? ಅಥವಾ ಎಲ್ಲಾ ಗೊತ್ತಿದ್ದು ಸುಮ್ಮನಿದ್ದಾರಾ ಎನ್ನುವ ಅನುಮಾನಗಳು ಹುಟ್ಟುಕೊಂಡಿದೆ. ಯಾವುದೇ ಅನುಮತಿಯಿಲ್ಲದೆ ತಮಗಿಷ್ಟ ಬಂದ ಹಾಗೆ ಈ ದಂಧೆಯನ್ನ ನಡೆಸಲಾಗುತ್ತಿದೆ. ಯಾವುದೇ ಬೋರ್ಡ್ ಹಾಕದೇ, ಅನುಮತಿ ಪಡೆಯದೆ ಸಾವು ಬದುಕಿನ ಮಧ್ಯೆ ಹೋರಾಡುವ ಜೀವಗಳಿಗೆ ಕುತ್ತು ತರೋ ರೀತಿಯಲ್ಲಿದೆ ಈ ದಂಧೆ. ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಈ ದಂಧೆಗೆ ಮೊದಲು ಬ್ರೇಕ್ ಹಾಕಿ, ಅಕ್ರಮದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.