ಶಿವಮೊಗ್ಗ: ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿರುವ ಮಾಣಿ ಡ್ಯಾಂನ ಕಣ್ಣಳತೆ ದೂರದಲ್ಲಿ ಮತ್ತೆ ಡೈನಮೈಟ್ಗಳ ಸ್ಫೋಟ ಕೇಳಿ ಬರುತ್ತಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾ ಮತ್ತೊಮ್ಮೆ ತಲೆ ಎತ್ತಿ ನಿಂತಿದೆ.
- Advertisement
ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ 52ಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ವರಾಹಿ ನದಿ ದಂಡೆಯಲ್ಲೇ ನಡೆಯುತ್ತಿರುವ ಈ ಕಲ್ಲು ಗಣಿಗಾರಿಕೆ ಬಗ್ಗೆ ಗಣಿಗಾರಿಕೆ ಇಲಾಖೆ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ಜಾಣ ಕುರುಡುತನ ತೋರುತ್ತಿವೆ. ಆರು ತಿಂಗಳ ಹಿಂದೆ ಪಬ್ಲಿಕ್ ಟಿವಿ ಈ ಕುರಿತು ಸಮಗ್ರ ವರದಿ ಮಾಡಿದಾಗ ಈ ಗಣಿಗಾರಿಕೆ ಸ್ಥಗಿತಗೊಂಡಿತ್ತು.
- Advertisement
- Advertisement
ಈ ಅಕ್ರಮ ಕ್ವಾರಿಯಲ್ಲಿ ಶಕ್ತಿಶಾಲಿ ಜಿಲೆಟಿನ್ ಸ್ಫೋಟ ನಡೆಸಲಾಗುತ್ತಿದ್ದು, ಅಣೆಕಟ್ಟೆಯ ಭದ್ರತೆಗೆ ಧಕ್ಕೆ ಆಗುವ ಸಾಧ್ಯತೆ ಇದೆ. ರಾಜ್ಯ ಹೆದ್ದಾರಿ 52ಕ್ಕೆ ಹೊಂದಿಕೊಂಡೇ ಕ್ರಷರ್ ಇದೆ. ಈ ಕ್ರಷರ್‍ನಿಂದ ಒಂದು ಕಿ.ಮೀ.ದೂರದಲ್ಲೇ ಕ್ವಾರಿ ಸಹ ಇದೆ. ಈ ಕ್ವಾರಿ ಮಾಲೀಕ ರವೀಂದ್ರ ಎಂಬಾತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಒಮ್ಮೆ ತಾಲೂಕು ಪಂಚಾಯ್ತಿಗೆ ಅಧ್ಯಕ್ಷರೂ ಆಗಿದ್ದರು. ಕ್ಷೇತ್ರದ ಶಾಸಕ ಕಿಮ್ಮನೆ ಆವರ ಕೃಪಾಕಟಾಕ್ಷದಲ್ಲಿ ಈ ಕ್ವಾರಿ ಯಾವುದೇ ಅಡೆ ತಡೆ ಇಲ್ಲದೆ ಎಲ್ಲಾ ನೀತಿನಿಯಮಗಳನ್ನು ಮೀರಿ ನಡೆಯುತ್ತಿದೆ.
ನದಿ ಪಾತ್ರದಲ್ಲಿ ಅದೂ ಅಣೆಕಟ್ಟೆಯ ಸಮೀಪದಲ್ಲಿ ಕಲ್ಲುಕ್ವಾರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಆದರೂ ಇಲ್ಲಿ ನಿರಾತಂಕವಾಗಿ ಕ್ವಾರಿ ನಡೆಯುತ್ತಿದೆ. ಈ ಅಕ್ರಮ ಕ್ವಾರಿಯಿಂದ ತೆಗೆದಿರುವ ಕಲ್ಲುಗಳನ್ನು ವಶಪಡಿಸಿಕೊಳ್ಳಬೇಕು. ಇದೂವರೆಗೂ ಇಲ್ಲಿ ಪರಿಸರ ನಾಶ ಮಾಡಿರುವ, ನದಿ ದಂಡೆಯಲ್ಲಿ ಕ್ವಾರಿ ನಡೆಸಿದ ಪ್ರಭಾವಿ ರಾಜಕಾರಣಿ ಮೇಲೆ ಕ್ರಮಕೈಗೊಳ್ಳಬೇಕು. ಜೊತೆಗೆ ಇಂಥ ಅಕ್ರಮಕ್ಕೆ ಅವಕಾಶ ನೀಡಿದ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಕೆಪಿಸಿ, ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಆದರೆ ಕಾಂಗ್ರೆಸ್ ನಾಯಕರೇ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆಂದು ಹೇಳಲಾಗಿದ್ದು ಇದು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ನದಿ ದಂಡೆಯಲ್ಲಿ ಹಾಗೂ ಅಣೆಕಟ್ಟೆ ಸಮೀಪದಲ್ಲಿ ಸ್ಫೋಟಕ ಬಳಸಿ ಕಲ್ಲುಗಣಿಗಾರಿಕೆ ನಡೆಸುವುದು ಕರ್ನಾಟಕ ಗಣಿ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಮಾಣಿ ಅಣೆಕಟ್ಟೆ ಕಲ್ಲು ಕ್ವಾರಿ ಕಾರಣದಿಂದ ಆಪಾಯದಲ್ಲಿದೆ. ಈ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಬಳಸಲಾಗುತ್ತಿದೆ. ಈ ಕಲ್ಲುಕ್ವಾರಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಕರ್ನಾಟಕದ ಚಿರಾಂಪುಂಜಿ ಹುಲಿಕಲ್ ಪ್ರದೇಶಕ್ಕೆ ತಾಗಿಕೊಂಡಿದೆ.