ಚಾಮರಾಜನಗರ: ಅಕ್ರಮವಾಗಿ ಜಲ್ಲಿಕಲ್ಲು ಕ್ರಶರ್ ನಿಂದ ಸುತ್ತಮುತ್ತಲಿನ ವಾತಾವರಣ ಹಾಗೂ ರೈತರ ಜಮೀನಿಗೆ ಹಾನಿಯಾಗಿರುವ ಘಟನೆ ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತನಾದ ಉಮೇಶ್ ಅಕ್ರಮವಾಗಿ ಕ್ರಶರ್ ಘಟಕ ನಡೆಸುತ್ತಿದ್ದು, ಇದರಿಂದಾಗಿ ಸುತ್ತಮುತ್ತಲ ಪರಿಸರ ಹಾಳಾಗಿದ್ದಲ್ಲದೆ, ರೈತರ ಜಮೀನಿಗೆ ತೊಂದರೆಯಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Advertisement
ಸಚಿವರ ಆಪ್ತರಾದ ಉಮೇಶ್ ಎಂಬವರು, ವಿಜಯ್ ಕುಮಾರ್ ಹಾಗೂ ವಿನಯ್ ಕುಮಾರ್ ಜೊತೆ ಸೇರಿ ತಾಲೂಕಿನ ಹರವೆ ಗ್ರಾಮದಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಕ್ರಶರ್ ಘಟಕ ನಡೆಸುತ್ತಿದ್ದಾರೆ. ಕ್ರಶರ್ ಘಟಕ ನಡೆಸಲು ಯಾವುದೇ ಅನುಮತಿ ಹಾಗೂ ಭೂ-ಪರಿವರ್ತನೆಯನ್ನು ಸಹ ಮಾಡಿಸಿಲ್ಲ. ಸಚಿವರ ಆಪ್ತನಾದ ನಮ್ಮನ್ನು ಯಾರು ಪ್ರಶ್ನೆ ಮಾಡುತ್ತಾರೆ? ಅಕ್ರಮವಾಗಿ ಕ್ರಶರ್ ಆರಂಭಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
Advertisement
ಕ್ರಶರ್ ಘಟಕದಿಂದಾಗಿ ಹರವೆ ಗ್ರಾಮದ ರೈತ ಮಾದಪ್ಪ ಎಂಬವರ ಜಮೀನಿಗೆ ಹಾನಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಲ್ಲು ತುಂಬಿದ ಲಾರಿ ಹಾಗೂ ಟಿಪ್ಪರ್ ಗಳು ಇವರ ಜಮೀನಿನ ಮೂಲಕ ಹಾದುಹೋಗುತ್ತಿರುವುದರಿಂದ ಕಲ್ಲುಗಳ ಬಿದ್ದು, ಜಮೀನಿನಲ್ಲಿ ಬೆಳೆ ಬೆಳೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಇದರಿಂದ ಕಂಗೆಟ್ಟ ರೈತ ಮಾದಪ್ಪ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ವೇ ನಂ 200ರಲ್ಲಿ ಟಿಪ್ಪರ್ ಓಡಾಟದಿಂದ ತೊಂದರೆಯಾಗುತ್ತದೆ ಎಂದು ಇದೇ ತಿಂಗಳ 7ರಂದು ತಡೆಯಾಜ್ಞೆ ತಂದಿದ್ದರು. ಆದರೆ ನ್ಯಾಯಾಲಯದ ತಡೆಯಾಜ್ಞೆಯನ್ನೇ ಉಲ್ಲಂಘಿಸಿ ಅಕ್ರಮವಾಗಿ ಕ್ರಶರ್ ಘಟಕ ಮುಂದುವರೆಸಿದ್ದಾರೆ.
Advertisement
ಕ್ರಶರ್ ಘಟಕದಿಂದಾಗಿ ಸುತ್ತಮುತ್ತಲಿನ ವಾತಾವರಣವು ಧೂಳು ಮಯವಾಗಿದೆ. ಇದರಿಂದಾಗಿ ರೈತರು ಬೆಳೆ ಬೆಳೆಯದಂತಾಗಿದ್ದು, ಲಾರಿಗಳ ಓಡಾಟದಿಂದ ರೈತರು ಬೇಸತ್ತು ಹೋಗಿದ್ದಾರೆ.