ರಾಯಚೂರು: ನಗರದಲ್ಲಿ ಮಧ್ಯರಾತ್ರಿ ಜೆಸಿಬಿಗಳು ಘರ್ಜಿಸಿದ್ದು, ಇಲ್ಲಿನ ಸಂತೋಷ ನಗರದಲ್ಲಿ ಅಕ್ರಮವಾಗಿ ಸಿಎ ಸೈಟ್‌ನಲ್ಲಿ (CA Site) ನಿರ್ಮಿಸಿದ್ದ ಶಿವ ಮತ್ತು ಗಣೇಶನ ದೇಗುಲ ತೆರವು ಮಾಡಲಾಗಿದೆ. ರಾಯಚೂರು (Raichuru) ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಮಧ್ಯರಾತ್ರಿ ಪೊಲೀಸ್ (Police) ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ಮಾಡಲಾಯಿತು.
ಎಲ್‌ಬಿಎಸ್ ನಗರ ಪ್ರೌಢ ಶಾಲೆಗೆ ಮಂಜೂರಾಗಿದ್ದ ಜಾಗದಲ್ಲಿ ದೇಗುಲ ನಿರ್ಮಿಸಲಾಗಿತ್ತು. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳು ಇಡಲು ಕಟ್ಟಿದ್ದ ಶೆಡ್‌ನ್ನೇ ದೇಗುಲವಾಗಿ ಪರಿವರ್ತಿಸಲಾಗಿತ್ತು. ಶಾಲಾ (School) ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಡಾವಣೆ ಜನ ದೇಗುಲ ನಿರ್ಮಿಸಿದ್ದರು. ಇದನ್ನೂ ಓದಿ: Kolar| ಚೆಂಡು ಹೂವು ಬೆಲೆ ಕುಸಿತ – ರಸ್ತೆಬದಿ ಸುರಿದು ರೈತ ಆಕ್ರೋಶ
2022 ಜೂನ್ 1 ರಲ್ಲಿ ಪ್ರೌಢಶಾಲೆ ಕಟ್ಟಡಕ್ಕೆ ಸಿ.ಎ. ಸೈಟ್ ಮಂಜೂರಾಗಿತ್ತು. ಜಾಗ ಮಂಜೂರು ಆದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಸಹ ಬಿಡುಗಡೆಯಾಗಿತ್ತು. ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿದ್ದರೂ ಸ್ಥಳೀಯರು ದೇಗುಲ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರು.
ಸ್ಥಳೀಯರ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇರಲು ಸದ್ಯ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.