Connect with us

Bagalkot

ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

Published

on

– ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರು ಆಡಿದ್ದೇ ಆಟ, ಅಧಿಕಾರಿಗಳು ಮಾಡಿದ್ದೇ ಕಾರುಬಾರು ಎನ್ನುವ ಪರಿಸ್ಥಿತಿ ಎದುರಾಗಿದೆ.

ಬಾದಾಮಿ ಜನರು ಸಿದ್ದರಾಮಯ್ಯ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಈಗ ಹುಸಿಯಾಗುತ್ತಿದೆ. ಯಾಕೆಂದರೆ ಓರ್ವ ಮಾಜಿ ಸಿಎಂ ಈ ಕ್ಷೇತ್ರದ ಶಾಸಕರಾದರೂ ಕ್ಷೇತ್ರದಲ್ಲಿನ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಬಾದಾಮಿ ತಾಲೂಕಿನ ಜಾಲಿಹಾಳ, ಚೊಳಚಗುಡ್ಡ, ನಾಗರಾಳ, ಸುಳ್ಳ, ಹೆಬ್ಬಳ್ಳಿ, ಕಿತ್ತಳಿ ಸೇರಿದಂತೆ 11 ಖಾಸಗಿ ಜಾಗದಲ್ಲಿ ಲೀಸ್ ಮೇಲೆ ಸರ್ಕಾರಿ ಬೆಲೆ ಮೂಲಕ ಮರಳು ಮಾರಾಟ ನಡೆಯುತ್ತಿದೆ. 10 ಟನ್ ಮರಳಿಗೆ 4 ಸಾವಿರ 800 ರೂಪಾಯಿ ಸರ್ಕಾರಿ ಬೆಲೆ ಇದೆ. ಆದರೆ ಲೀಸ್‍ದಾರರು 14 ಸಾವಿರ ಹಣ ಪಡೆಯುತ್ತಿದ್ದಾರೆ. ಲೀಸ್‍ದಾರರ ಜೊತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಬಾದಾಮಿ ಕ್ಷೇತ್ರದ ಹನ್ನೊಂದು ಮರಳು ಬ್ಲಾಕ್‍ನಲ್ಲಿ ಅಲ್ಲಿನ ಲೀಸ್‍ದಾರರೆ ಯಜಮಾನರಾಗಿದ್ದಾರೆ. ಟಿಪ್ಪರ್ ಮಾಲೀಕರಿಗೆ ನೀಡಿದ ಮರಳಿಗೆ ಇಲ್ಲಿ ಯಾವುದೇ ಬಿಲ್‍ನ್ನು ನೀಡಲ್ಲ. ಟಿಪ್ಪರ್ ಮಾಲೀಕರು ವಾಹನ ಬಾಡಿಗೆ ಡ್ರೈವರ್ ಖರ್ಚು ಸೇರಿ ಜನರಿಗೆ 17 ಸಾವಿರಕ್ಕೆ ಮರಳನ್ನು ತಲುಪಿಸುತ್ತಿದ್ದಾರೆ. ಜೊತೆಗೆ ಮರಳಿಗಾಗಿ ಮಲಪ್ರಭಾ ನದಿಯನ್ನು ಕೂಡ ಬಗೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಬೇರೆನೇ ಕಾರಣಗಳನ್ನು ಹೇಳುತ್ತಿದ್ದಾರೆ.

ಮಾಜಿ ಸಿಎಂ ಕ್ಷೇತ್ರದಲ್ಲಿ ಸಕ್ರಮವಾಗಿ ನಡೆಯಬೇಕಿದ್ದ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಸಿದ್ದರಾಮಯ್ಯನವರು ಇತ್ತ ಗಮನಹರಿಸಿ ಈ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *