ಸುಳ್ಯದ ಪಯಸ್ವಿನಿ ನದಿಯಲ್ಲಿ ಅಕ್ರಮ ಮರಳು ದಂಧೆ- ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Public TV
3 Min Read
mangaluru dakshina kannada illigal sand mining

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಪೆಯಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಒಂದೊಮ್ಮೆ ಕಾಟಾಚಾರಕ್ಕೆ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ಎಂದಿನಂತೆ ದಂಧೆ ಮುಂದುವರಿಯುತ್ತದೆ. ಇದರಿಂದ ಜನಸಾಮಾನ್ಯರನ್ನು ಹೈರಾಣಾಗಿಸಿದೆ.

ಸುಬ್ರಹ್ಮಣ್ಯ, ಧರ್ಮಸ್ಥಳದ ಬಳಿಕ ಸುಳ್ಯ ತಾಲೂಕಿನ ಅರಂತೋಡು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ದಿನಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದೆ. ಸಂಜೆಯಾದರೆ ಸಾಕು ಸುಳ್ಯ ತಾಲೂಕಿನ ಅರಂತೋಡು ಪೇಟೆ ದಾಟಿ ಮುಂದಕ್ಕೆ ಹೋಗುವಾಗ ಕಾಮಧೇನು ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಮರಳು ಸಾಗಾಟದ ಟಿಪ್ಪರ್ ಗಳದ್ದೇ ಹಾವಳಿ. ಮಲ್ಲಡ್ಕದ ಪಯಸ್ವಿನಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಅಡ್ಡೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.

mangaluru dakshina kanna sand mining 1

ಭಾರೀ ಗಾತ್ರದ ಟಿಪ್ಪರ್, ಹಿಟಾಚಿ ಸಂಚಾರಕ್ಕೆ ಗ್ರಾಮದ ಕಿರಿದಾದ ಕಚ್ಚಾರಸ್ತೆ ಬಳಕೆಯಾಗುತ್ತಿದ್ದು, ಇದರಿಂದ ಗ್ರಾಮದ ಜನರು ನಿದ್ದೆ ಕಳೆದುಕೊಂಡಿದ್ದಾರೆ. ರಾತ್ರಿಯಿಂದ ನಸುಕಿನವರೆಗೂ ಎಡೆಬಿಡದೆ ಮರಳು ಸಾಗಾಟ ನಡೆಯುತ್ತಿದ್ದು, ಮಳೆಗಾಲದಲ್ಲಿ ರಸ್ತೆಯಲ್ಲಿ ಬೇರೆ ವಾಹನಗಳ ಸಂಚಾರವೇ ಅಸಾಧ್ಯವಾಗಿದೆ. ಮಲ್ಲಡ್ಕದಲ್ಲಿ ನದಿಯ ಪಕ್ಕದ ಮನೆಯ ಹಿಂಭಾಗದಲ್ಲೇ ಅಕ್ರಮ ಮರಳು ದಾಸ್ತಾನು ಇರಿಸಲಾಗಿದ್ದು, ಗಣಿ ಇಲಾಖೆಗೆ ಗೊತ್ತಿದ್ದರೂ ದಾಳಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

ಇಲ್ಲಿನ ಮರಳು ದಂಧೆಯ ಕುಳಗಳು ಜನಪ್ರತಿನಿಧಿಯೊಬ್ಬರ ಜೊತೆ ಗಳಸ್ಯ ಕಂಠಸ್ಯ ಸ್ನೇಹ ಹೊಂದಿದ್ದು, ಬೆಂಗಳೂರು, ದೆಹಲಿಗೆ ಜೊತೆಯಲ್ಲಿ ತಿರುಗಾಡುವ ಕಾರಣ ಸ್ಥಳೀಯ ಠಾಣಾ ಪೊಲೀಸರು ಅಕ್ರಮ ನೋಡಿಯೂ ಸುಮ್ಮನಿರುವ ಆರೋಪ ಸ್ಥಳೀಯರದ್ದಾಗಿದೆ.

mangaluru dakshina kanna sand mining 3 e1633451433897

ಇದೇ ರಸ್ತೆಯಲ್ಲಿ ಮಡಿಕೇರಿ ಮಾರ್ಗವಾಗಿ ಮುಂದಕ್ಕೆ ತೆರಳಿದರೆ ಮರ್ಕಂಜ ಕ್ರಾಸ್ ರಸ್ತೆಗಿಂತ ಕೆಲವೇ ಮೀಟರ್ ಹಿಂದೆ ಖಾಸಗಿ ವ್ಯಕ್ತಿಯೊಬ್ಬ ತನ್ನ ತೋಟದ ಬಳಿಯ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾನೆ. ಹಗಲು ಹೊತ್ತು ತೋಟಕ್ಕೆ ಗೇಟ್ ಜಡಿದು ಸಂಜೆಯಾಗುತ್ತಿದ್ದಂತೆ ಗೇಟ್ ತೆರೆದು ಟಿಪ್ಪರ್ ಗಳ ಸಾಲು ಮರಳು ಹೇರಿಕೊಂಡು ಸಾಗುತ್ತಿದ್ದರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಮರಳುಗಾರಿಕೆ ನಿಂತಿದೆ. ಜಿಲ್ಲಾಡಳಿತ ಯಾರ್ಡ್ ಗಳಿಗೆ ಮರಳು ಸಾಗಾಟಕ್ಕೆ ಮಾತ್ರ ಅನುಮತಿ ನೀಡಿದೆ. ಹಾಗಿದ್ದರೂ ಇಲ್ಲಿಂದ ನೂರಾರು ಲೋಡ್ ಮರಳು ಸುಳ್ಯ, ಮಡಿಕೇರಿ ಭಾಗಕ್ಕೆ ಸಾಗಾಟವಾಗುತ್ತಿದೆ. ಇದರ ಹಿಂದಿರುವ ಪ್ರಭಾವಶಾಲಿ ಕೈ ಯಾವುದು ಅನ್ನೋದು ಜನರ ಪ್ರಶ್ನೆ. ಪಯಸ್ವಿನಿ ನದಿಯಲ್ಲಿ ಮರಳು ದಂಧೆಯಿಂದ ಪ್ರಾಕೃತಿಕ ಸಮತೋಲನ ತಪ್ಪಿಹೋಗಿ ಮುಂದೊಂದು ದಿನ ಈ ಭಾಗದಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅಚ್ಚರಿ ಪಡಬೇಕಿಲ್ಲ. ಹಾಗಾಗುವ ಮುನ್ನ ಜಿಲ್ಲಾಡಳಿತ, ಗಣಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ದಂಧೆಗೆ ಶಾಶ್ವತ ಬ್ರೇಕ್ ಹಾಕಬೇಕಿದೆ.

mangaluru dakshina kanna sand mining 2

ಧರ್ಮಸ್ಥಳದಲ್ಲಿ ಹಗಲು ಬಂದ್, ರಾತ್ರಿ ಓಪನ್!
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಹಗಲು ವೇಳೆ ನಿಂತಿದ್ದು, ರಾತ್ರಿ ವೇಳೆ ಎಂದಿನಂತೆ ಮುಂದುವರಿದಿದೆ. ಮುಂಡಾಜೆ ಚಾರ್ಮಾಡಿ ರಸ್ತೆಯಲ್ಲಿ ಮರಳು ಸಾಗಾಟದ ಟಿಪ್ಪರ್ ಗಳು ಡ್ರೆಜಿಂಗ್ ಬಳಸಿ ತೆಗೆದ ಮರಳನ್ನು ಸಾಗಿಸುತ್ತಿದ್ದು, ಇಲ್ಲಿನ ದಂಧೆ ಸಂಪೂರ್ಣ ನಿಲ್ಲುವುದು ಯಾವಾಗ ಎಂದು ಧರ್ಮಸ್ಥಳದ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ. ಎಎಸ್‍ಪಿ ಯಾಗಿ ಖಡಕ್ ಆಫೀಸರ್ ಶಿವಂಶು ರಜಪುತ್ ಅಧಿಕಾರ ಸ್ವೀಕರಿಸಿದ್ದು, ಈ ಭಾಗದ ಅಕ್ರಮ ದಂಧೆ ಮೆಟ್ಟಿನಿಲ್ಲುವ ವಿಶ್ವಾಸ ಜನರಲ್ಲಿದೆ. ನಿನ್ನೆ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಮರಳು ಸಾಗಾಟದ ಟಿಪ್ಪರ್ ಹಿಡಿದಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಧರ್ಮಸ್ಥಳ, ಸುಳ್ಯದಲ್ಲಿ ನದಿಯೊಡಲು ಬಗೆಯುತ್ತಿರುವ ದಂಧೆ ಮಟ್ಟಹಾಕಲು ಸಂಬಂಧಪಟ್ಟ ಅಧಿಕಾರಿಗಳು ಮನಸು ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *