ಕೊಪ್ಪಳ: ಗುತ್ತಿಗೆದಾರರು ನಿಯಮ ಮೀರಿ ಮರಳು ದಂಧೆ ನಡೆಸುತ್ತಿರುವ ಘಟನೆ ತಾಲೂಕಿನ ಕೋಳೂರು ಬ್ಲಾಕ್ ನಲ್ಲಿ ನಡೆದಿದೆ.
ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಇದೀಗ ಜಿಲ್ಲೆಯ ಕೋಳೂರು ಬ್ಲಾಕ್‍ನಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದ್ದು, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.
Advertisement
ಮರಳು ಬ್ಲಾಕ್‍ನ ಗುತ್ತಿಗೆದಾರರು ಹಗಲು ದರೋಡೆಗೆ ಇಳಿದಿದ್ದಾರೆ. ಸರ್ಕಾರ ಮರಳು ಮಾರಾಟಕ್ಕೆ ಬೆಲೆ ನಿಗಧಿಪಡಿಸಿದ್ದರೂ, ದುಪ್ಪಟ್ಟು ಬೆಲೆಗೆ ಮಾರಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಸರ್ಕಾರದ ಟೆಂಡರ್ ನಿಯಮದಂತೆ 4 ಟನ್ ಮರಳಿಗೆ 7 ಸಾವಿರ ರೂಪಾಯಿ ಮಾತ್ರ ಪಡೆಯಬೇಕು. ಆದರೆ ಗುತ್ತಿಗೆದಾರರು ಎಗ್ಗಿಲ್ಲದೆ 15 ಸಾವಿರ ರೂಪಾಯಿ ಕೀಳುತ್ತಿದ್ದಾರೆ.
Advertisement
Advertisement
ಟೆಂಡರ್ ನಿಯಮದ ಪ್ರಕಾರ ಟಿಪ್ಪರ್ ಲಾರಿಗಳಲ್ಲಿ ಕೇವಲ 4 ಟನ್ ಮರಳನ್ನು ಮಾತ್ರ ಸಾಗಿಸಬೇಕು ಎಂದು ಸೂಚಿಸಿದೆ. ಇದನ್ನು ಕಡೆಗಣಿಸಿದ ಗುತ್ತಿಗೆದಾರರು ಲಾಭಕ್ಕಾಗಿ ಟಿಪ್ಪರ್‍ಗಳಲ್ಲಿ 20 ಟನ್‍ಗಳಷ್ಟು ಮರುಳು ಸಾಗಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದ್ದಾರೆ.
Advertisement
ಬ್ಲಾಕ್‍ನ ಕೇವಲ 12 ಎಕರೆ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಬೇಕೆಂಬ ನಿಯಮವನ್ನು ಗಾಳಿಗೆ ತೂರಿ, ನೂರಾರು ಎಕರೆಗಳಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಇದರ ಪರಿಣಾಮ ಅಂತರ್ಜಲ ಕುಸಿತಗೊಂಡು ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.