ಕೊಡಗು: ಪ್ರಕೃತಿಯ ತವರು ಕೊಡಗು (Kodagu) ಜಿಲ್ಲೆಯ ಮೇಲೆ ಮನುಷ್ಯ ತನ್ನ ಹಣದ ಧಾಹಕ್ಕಾಗಿ ಪ್ರಕೃತಿ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಲೇ ಇದ್ದಾನೆ. ಈ ನಡುವೆ ಕೆಲ ಅಧಿಕಾರಿಗಳು ಅವರೊಂದಿಗೆ ಸೇರಿಕೊಂಡು ಪ್ರಕೃತಿ ಒಡಲು ಬಗೆಯಲು ಪ್ರೋತ್ಸಾಹ ಕೋಡುತ್ತಿದ್ದಾರೆ ಅನ್ನೋ ಅನುಮಾನ ಕಾಡತೋಡಗಿದೆ.
ಭೂ ತಾಯಿ ಒಡಲನ್ನು ಕೊರೆಯುತ್ತಿರುವ ದುರಳರು. ನಿತ್ಯ ಧೂಳುಮಯದಿಂದ ಓಡಾಟ ನಡೆಸಲಾಗದೇ ಮನೆಯಲ್ಲೇ ಇರುವ ವೃದ್ಧರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಈ ಪರಿಸ್ಥಿತಿ ಎಂದು ಆಕ್ರೋಶ ಹೊರ ಹಾಕುತ್ತಿರುವ ಗ್ರಾಮಸ್ಥರು. ನಿಮ್ಮ ʻಪಬ್ಲಿಕ್ ಟಿವಿʼ (Public TV) ವರದಿ ಮಾಡಿ ಒಂದು ತಿಂಗಳ ಬಳಿಕ ಊರಿಗೆ ಆಗಮಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಗ್ರಾಮದ ಯುವಕರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಯಲಕನೂರು ಮತ್ತು ಹೊಸಹಳ್ಳಿ ಗ್ರಾಮದಲ್ಲಿ ಭೂಗರ್ಭವನ್ನೇ ಇಲ್ಲಿನ ಪ್ರಭಾವಿ ವ್ಯಕ್ತಿಗಳು ಬಗೆಯುತ್ತಿರುವ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಮಾಡಿತ್ತು. ಈ ಬೆನ್ನಲ್ಲೇ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಸ್ಥಳವನ್ನ ವೀಕ್ಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಯುವಕರು ವಿವಿಧ ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಭೂ ವಿಜ್ಞಾನಿ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಬಂದ ಸಂದರ್ಭದಲ್ಲೂ ಅಗತ್ಯ ದಾಖಲೆಗಳು ತರದ ಹಿನ್ನೆಲೆ ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಗಳ ನಡುವೆ ಮಾತಿನ ಚಕಮಕಿ ನಡೆಯಿತು. ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಎಲ್ಲಾ ಮಾನದಂಡಗಳನ್ನ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಗಣಿಗಾರಿಕೆ ನಡೆದ ಎಲ್ಲಾ ಭಾಗದಲ್ಲಿ ಸರ್ವೇ ಕಾರ್ಯವನ್ನ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಗ್ರಾಮಸ್ಥರು ಮಾತಾನಾಡಿ, ಇಲ್ಲಿಗೆ ಬಂದಿರುವ ಅಧಿಕಾರಿಗಳು ನೇಪಮಾತ್ರಕ್ಕೆ ಸ್ಥಳ ಪರಿಶೀಲನೆ ನಡೆಸಲು ಬಂದಿದ್ದಾರೆ. ಪ್ರಭಾವಿ ವ್ಯಕ್ತಿಗಳ ಹಣದಾಸೆಗೆ ಪ್ರಕೃತಿ ಮೇಲೆ ದೌರ್ಜನ್ಯ ಎಸಗಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೋರ ಹಾಕಿದ್ರು. ಅಲ್ಲದೇ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿದ ಮೇಲೆ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ತಂತಿ ಬೇಲಿಯನ್ನು ಹಾಕಿದ್ದಾರೆ ಎಂದರು.
ಒಟ್ನಲ್ಲಿ ಈ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ರು ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡರ ಹಾಗೆ ವರ್ತನೆ ಮಾಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ನಿತ್ಯ ಭಾರೀ ಸ್ಫೋಟಕಗಳನ್ನ ಬಳಕೆ ಮಾಡುತ್ತಿರುವುದರಿಂದ ಮೀಸಲು ಅರಣ್ಯ ಪ್ರದೇಶದಲ್ಲಿ ಇರುವ ವನ್ಯಜೀವಿಗಳು ಕಾಡಾನೆಗಳು ಗ್ರಾಮದ ತೋಟ ಮತ್ತು ಕೃಷಿ ಭೂಮಿಗೆ ತೆರಳಿ ಇಲ್ಲಿನ ಜನರ ಬದುಕನ್ನೇ ಸರ್ವನಾಶ ಮಾಡುತ್ತಿದೆ.




