ಮಡಿಕೇರಿ: ಅದು ಪ್ರಕೃತಿಯ ತವರು ಕೊಡಗು (Kodagu), ದೇಶ ವಿದೇಶಗಳ ಜನರು ನಿತ್ಯ ಈ ಊರಿಗೆ ಭೇಟಿ ನೀಡಿ ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುತ್ತಾರೆ. ಬೆಟ್ಟಗುಡ್ಡಗಳ ಹಸಿರಿನ ವಾತಾವರಣ ಕಂಡು ಖುಷಿಯಿಂದ ತೆರಳುತ್ತಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ (Tourism) ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇಂತಹ ಕೊಡಗಿನಲ್ಲಿ ಕೆಲ ದುರುಳರು ಹಣದ ಆಸೆಗೆ ಬೃಹತ್ ಬೆಟ್ಟಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಇಡೀ ಬೆಟ್ಟ ಪ್ರದೇಶವನ್ನೇ ರಕ್ಕಸನ ಬಾಯಿಯಂತೆ ನುಂಗುತ್ತಿದ್ದಾರೆ. ಹೀಗಾಗಿ ಆ ಊರ ಸುತ್ತಮುತ್ತ ಪ್ರದೇಶಗಳಲ್ಲಿ ವಾಸ ಮಾಡುವ ಜನರು ದಿನ ಕಳೆದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಪಂಚಾಯತಿ ವ್ಯಾಪ್ತಿಯ ಯಲಕನೂರು ಹಾಗೂ ಹೊಸಳ್ಳಿ ಗ್ರಾಮದಲ್ಲಿ ಕೆಲ ದುರುಳರು ಪ್ರಕೃತಿಯ ಒಡಲಿಗೆ ಕೈಹಾಕಿದ್ದಾರೆ. ಲಾರಿ, ಇಟಾಚಿಗಳನ್ನ ಬಳಸಿಕೊಂಡು ಹಗಲು ರಾತ್ರಿ ಎನ್ನದೇ ಬಾರಿ ಸ್ಫೋಟಕಗಳನ್ನು ಸಿಡಿಸಿ ಅಕ್ರಮವಾಗಿ ಗಣಿಗಾರಿಕೆ (Illegal Mining) ನಡೆಸುತ್ತಿದ್ದಾರೆ. ಇದರಿಂದ ಹಲವಾರು ಜನರು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ.
ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 17ಕ್ಕೂ ಹೆಚ್ಚು ಕಲ್ಲು ಕೊರೆಗಳು ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಇತ್ತಿಷ್ಟು ಜಾಗದಲ್ಲಿ ಗಣಿಗಾರಿಕೆ ನಡೆಸುತ್ತೇವೆ ಅಂತ ಅನುಮತಿ ಪಡೆದಿದ್ದಾರೆ. ಆದ್ರೆ ಕಲ್ಲುಗಣಿಗಾರಿಕೆ ನಡೆಸುತ್ತಿರುವರು ಇಲಾಖೆಯ ಕೆಲ ಮಾನದಂಡಗಳನ್ನ ಗಾಳಿಗೆ ತೂರಿ ಪ್ರಕೃತಿ ಮಾತೆಯ ಭೂಗರ್ಭವನ್ನೇ ಸೀಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಭಾರೀ ಸ್ಫೋಟಕಗಳನ್ನ ಸಿಡಿಸಿ ಗಣಿ ಕೆಲಸ ನಡೆಸುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶವನ್ನ ಬೀಡದೇ ಮನಸ್ಸೋ ಇಚ್ಚೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದು ಸುತ್ತಮುತ್ತ ನೆಲೆಸಿರುವ ಪ್ರದೇಶದ ಜನರನ್ನೂ ಆತಂಕ್ಕೆ ದೂಡಿದೆ.
ಇನ್ನೂ ಈ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಕಲ್ಲುಗಣಿಗಾರಿಕೆ ಅಕ್ರಮವಾಗಿದೆ. ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಊರಿನ ವಾತಾವರಣ ಕಲುಷಿತಗೊಂಡು ಗ್ರಾಮದ ಶೇ.90ರಷ್ಟು ಮಂದಿಗೆ ಶ್ವಾಸಕೋಶದ ತೊಂದರೆ ಎದುರಾಗಿದೆ. ಹೀಗಾಗಿ ಕಲ್ಲುಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ದಯಾಮರಣ ನೀಡಿ ಎಂದು ಗ್ರಾಮಸ್ಥರು ವಿವಿಧ ಇಲಾಖಾ ಅಧಿಕಾರಿಗಳ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಲ್ಲುಗಣಿಗಾರಿಕೆಯಿಂದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿದೆ. ಅತೀ ಹೆಚ್ಚು ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು, ಜನರ ಬದುಕು ದುಸ್ತರವಾಗಿದೆ. ಸಂಜೆ ವೇಳೆ ಕೋರೆಗಳಲ್ಲಿ ಭಾರೀ ಸ್ಫೋಟಗಳನ್ನು ಬಳಸಲಾಗುತ್ತಿದೆ. ಇಲ್ಲಿನ ಮನೆಗಳೂ ಸಾಕಷ್ಟು ಬಿರುಕುಬಿಟ್ಟಿವೆ. ಜೀವನವೇ ನರಕವಾಗಿದೆ ಗ್ರಾಮಸ್ಥರು ಅಧಿಕಾರಿಗಳೆದುರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದೆ ಅಧಿಕಾರಿಗಳು ತಮ್ಮ ಪಾಡಿಗೆ ಇದ್ದಾರೆ. ಇನ್ನೂ ಕೆಲವರು ಗ್ರಾಮಸ್ಥರಿಗೆ ಹಣ ನೀಡಿ ಇಲ್ಲಿ ಯಾವ್ದೇ ಸಮಸ್ಯೆ ಇಲ್ಲವೆಂದು ಹೇಳುವಂತೆ ಹೇಳಿಕೊಟ್ಟಿದ್ದಾರೆ ಅಂತ ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ವೇಳೆ ಯುವಕನೊಬ್ಬ ಹೇಳಿಕೊಂಡಿದ್ದಾನೆ.




