ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಕಂಟಕ – ಕಣ್ಣುಚ್ಚಿ ಕುಳಿತ ಸರ್ಕಾರ

Public TV
2 Min Read
KRS 2

ಮಂಡ್ಯ: ಅಕ್ರಮ ಗಣಿಗಾರಿಯಿಂದಾಗಿ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗದ ಲಕ್ಷಾಂತರ ಜನರ ಜೀವ ನಾಡಿಯಾಗಿರುವ ಕೆಆರ್‌ಎಸ್‌ ಅಣೆಕಟ್ಟೆ ಇದೀಗ ಅಪಾಯದ ಅಂಚಿನಲ್ಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯ ಸ್ವಾರ್ಥಕ್ಕಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದಾಗಿ ಅಪಾಯದ ಸ್ಥಿತಿಯಲ್ಲಿ ಇದೆ.

125 ಅಡಿ ಎತ್ತರ ಹಾಗೂ 3.5 ಕಿಲೋಮೀಟರ್ ಅಗಲವಿರುವ ಕೆಆರ್‌ಎಸ್‌ ಜಲಾಶಯವನ್ನು ಸರ್.ವಿಶ್ವೇಶ್ವರಯ್ಯನವರು ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗದ ಜನರಿಗೆ ಉಪಯೋಗವಾಗಲೆಂದು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದಾರೆ. ಈ ಜಲಾಶಯಕ್ಕೆ ಸರಿ ಸುಮಾರು 80ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಡ್ಯಾಂನಲ್ಲಿ ಯಾವುದೇ ಲೋಪ ದೋಷಗಳು ಕಂಡುಬಂದಿಲ್ಲ. ಆದರೆ ಇದೀಗ ಕೆಆರ್‍ಎಸ್ ಜಲಾನಯನ ಪ್ರದೇಶದ ಸುತ್ತ ಗಣಿಗಾರಿಕೆ ನಡೆಸುತ್ತಿರುವ ಪರಿಣಾಮ ಈ ಅಣೆಕಟ್ಟೆಗೆ ಅಪಾಯ ಬಂದೊದಗುತ್ತಿದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತಿದೆ.

KRS

ಕೆಆರ್‌ಎಸ್‌ ಡ್ಯಾಂನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮಾಡಬಾರದು ವೈಜ್ಞಾನಿಕವಾಗಿ ವರದಿ ನೀಡಲಾಗಿದೆ. ಹೀಗಿದ್ದರು ಸಹ ಬೇಬಿಬೆಟ್ಟ, ಚಿನಕುರುಳಿ, ಹೊನಗನಹಳ್ಳಿ ಸೇರಿದಂತೆ ಶ್ರೀರಂಗಪಟ್ಟಣ ವ್ಯಾಪ್ತಿಯ ಹಲವು ಭಾಗದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಈ ಹಿಂದೆ ಈ ಭಾಗದಲ್ಲಿ ಗಣಿಗಾರಿಕೆ ಮಾಡಬಾರದು ಎಂದು ತಾತ್ಕಾಲಿಕ ನಿರ್ಬಂಧವನ್ನು ಹೇರಿತ್ತು. ಹೀಗಿದ್ದರು ಈ ಭಾಗದಲ್ಲಿ ಆದೇಶವನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಸುತ್ತಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಮಂಡ್ಯದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಸಹ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಈ ವೇಳೆ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಗಣಿಗಾರಿಕೆಯನ್ನು ತಡೆಬೇಕು. 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಷ್ಟು ಗಣಿಗಾರಿಕೆ ನಡೆಯುತ್ತಿವೆ, ಗಣಿಗಾರಿಕೆ ನಡೆದರೆ ಕೆಆರ್‌ಎಸ್‌ ಅಣೆಕಟ್ಟೆಗೆ ಹೇಗೆ ಅಪಾಯ ಬರುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ವರದಿ ನೀಡಲು ಆದೇಶ ಮಾಡಿದ್ದರು. ಆದರೆ ಇಲ್ಲಿಯವರೆಗೂ ಈ ಭಾಗದಲ್ಲಿ ಗಣಿಗಾರಿಕೆ ನಿಂತಿಲ್ಲ.

krs dam 1

ಸಮ್ಮಿಶ್ರ ಸರ್ಕಾರ ಇದ್ದಂತ ವೇಳೆಯಲ್ಲಿ ಸದ್ಯ ಸಿಎಂ ಆಗಿರುವ ಯಡಿಯೂರಪ್ಪ ಅವರು ಗಣಿಗಾರಿಕೆ ನಿಲ್ಲಿಸಬೇಕು, ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಆಗಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಅವರದ್ದೇ ಸರ್ಕಾರ ಇದ್ದು, ಅವರೇ ಸಿಎಂ ಆಗಿದ್ದರೂ ಕೂಡ ಈ ಬಗ್ಗೆ ಮಾತ್ರ ಧ್ವನಿ ಎತ್ತುವ ಕೆಲಸ ಮಾಡುತ್ತಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಹೀಗೆ ಮೂಕ ಪ್ರೇಕ್ಷರಾಗಿ ಇರೋದ್ರಿಂದ ಕೆಆರ್‌ಎಸ್‌ ವ್ಯಾಪ್ತಿಯಲ್ಲಿ ಗಣಿಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಕೃಷ್ಣರಾಜಸಾಗರ ಡ್ಯಾಂ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಲಾದರೂ ಸರ್ಕಾರ ತನ್ನ ಜಾಣ ಕುರುಡನ್ನು ಗಣಿಗಾರಿಕೆಯನ್ನು ತಡೆದು, ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗದ ಲಕ್ಷಾಂತರ ಜನರ ಜೀವ ನಾಡಿ ಆಗಿರುವ  ಕೆಆರ್‌ಎಸ್‌ ಡ್ಯಾಂನ್ನು ಉಳಿಸುವ ಕಡೆಗೆ ಗಮನ ಹರಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *