ಧಾರವಾಡ: ಅಭಿವೃದ್ಧಿ ವಿಚಾರದಲ್ಲಿ ಅಕ್ರಮ ನಡೆದಿದ್ದಕ್ಕೆ ಸಂಸದ ಪ್ರಹ್ಲಾದ್ ಜೋಶಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸ್ನೇಹಲ್ ಅವರ ಮೇಲೆ ಹರಿಹಾಯ್ದ ಸಂಸದರು, ಧಾರವಾಡ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನಾಲ್ಕು ಸಾವಿರ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಒಂದೇ ಕುಟುಂಬಕ್ಕೆ ನಾಲ್ಕು ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಕುರಿತು 6 ತಿಂಗಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಎಲ್ಲಿ ತಪ್ಪಾಗಿದೆ ಎನ್ನುವ ವರದಿಯನ್ನು ಕೂಡಾ ನೀಡಿಲ್ಲ. ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಜೋಶಿ ಅವರು ಎಚ್ಚರಿಕೆ ನೀಡಿದರು.
ಹೆಸರಿಗೆ ಮಾತ್ರ ಸರ್ಕಾರ:
ಹೆಸರಿಗೆ ಮಾತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವಿದೆಯೇ ಹೊರತು, ಸ್ಥಳೀಯವಾಗಿ ಸರ್ಕಾರ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಸರ್ಕಾರ ರಚನೆಯಾಗಿ ಸುಮಾರು ದಿನಗಳೇ ಕಳೆದಿವೆ. ಇಲ್ಲಿವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ತಿಕ್ಕಾಟದಿಂದಾಗಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದರ ಲಾಭ ಪಡೆದಿರುವ ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ. ಸದ್ಯ ಉಸ್ತುವಾರಿ ಸಚಿವರೇ ಇಲ್ಲದಿರುವುದರಿಂದ ಜಿಲ್ಲೆಗೆ ಯಾರೂ ಗತಿ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.