– ಬೆಂಗ್ಳೂರಿನ ಕರಾಳ ಮಾಂಸ ಮಾರಾಟ ದಂಧೆ ಬಯಲು
– ತಾಜಾ ಕೋಳಿ ಜೊತೆ ಸತ್ತ ಕೋಳಿ ಸೇರಿಸಿ ಮಾರಾಟ
ಬೆಂಗಳೂರು: ಮಾಂಸ ಪ್ರಿಯರೇ ನೀವು ತಿನ್ನೋ ಕೋಳಿ ಬಗ್ಗೆ ಗೊತ್ತಾದರೆ ಅಯ್ಯೋ ಇಷ್ಟು ದಿನ ಇದನ್ನ ನಾವು ತಿಂದಿದ್ದು ಎಂದು ಶಾಕ್ ಆಗುತ್ತೀರ. ಸಿಲಿಕಾನ್ ಸಿಟಿಯಲ್ಲಿ ಸತ್ತ ಕೋಳಿಗಳ ಕರಾಳ ಮಾರಾಟ ದಂಧೆ ನಡೆಯುತ್ತಿರುವ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ರಾಜ್ಯ ರಾಜಧಾನಿಯ ಹಲವು ಕಡೆ ನಿಮಗೆ ಗೊತ್ತಿಲ್ಲದೆ ಸತ್ತು ಒಂದೆರಡು ದಿನ ಆಗಿರುವ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿತ್ತು. ಆಗ ಈ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.
Advertisement
Advertisement
ಪಬ್ಲಿಕ್ ಟಿವಿ ತಂಡ ಮೊದಲಿಗೆ ಮಾಹಿತಿಯಂತೆ ಹೆಗ್ಗನಹಳ್ಳಿಯ ಚಿಕನ್ ಸೆಂಟರ್‌ಗೆ ಹೋಗಿದ್ದು, ನಮ್ನ ಪ್ರತಿನಿಧಿ ಕಬಾಬ್ ಅಂಗಡಿ ಹೊಸದಾಗಿ ಪ್ರಾರಂಭ ಮಾಡ್ತಿದ್ದೀವಿ, ಚಿಕನ್ ಬೇಕಿತ್ತು, ಎಷ್ಟು ರೇಟ್ ಎಂದು ವಿಚಾರಿಸಿದ್ದಾರೆ. ಆಗ ಅಲ್ಲಿದ್ದ ಚಿಕನ್ ಅಂಗಡಿ ವ್ಯಾಪಾರಿ ಕೂಡಲೇ 50 ರೂಪಾಯಿ ಎಂದು ಹೇಳಿದ. ಬಳಿಕ 200 ರೂಪಾಯಿ ಆಸುಪಾಸಿನಲ್ಲಿರುವ ಚಿಕನ್ ಬೆಲೆ ಹೇಗೆ 50 ರೂಪಾಯಿಗೆ ಸಿಗುತ್ತೆ ಅಂದಾಗ ಅನುಮಾನ ಬಂದು, ವಿಚಾರವನ್ನು ಕೆದುಕುತ್ತಾ ಹೋದಾಗ ಒಂದೊಂದೆ ಸತ್ತ ಕೋಳಿ ದಂಧೆ ಬಯಲಾಯಿತು.
Advertisement
Advertisement
ಮೊದಲಿಗೆ ಅಂಗಡಿಯವನು ಮಾಂಸ ತೆಗೆದು ಕೋಳಿ ಬಾಡಿ 50 ರೂಪಾಯಿ, ನಮಗೆ ಅದೇ ರೀತಿ ಬರುತ್ತೆ ಎಂದಿದ್ದಾನೆ. ಅಲ್ಲಿಗೆ ಈ ಸತ್ತ ಕೋಳಿ ಮಾರಾಟದ ಜಾಲ ದೊಡ್ಡದಿದೆ ಅನ್ನೊದು ಗೊತ್ತಾದ ಬಳಿಕ ಅಲ್ಲಿಂದ ನೇರವಾಗಿ ಸಿಟಿ ಮಾರುಕಟ್ಟೆಯ ಮಾಂಸದ ಅಂಗಡಿಗೆ ತಂಡ ತೆರಳಿತು.
ಕೆ.ಆರ್ ಮಾರ್ಕೆಟಿನಲ್ಲಿರುವ ಮಾಂಸದ ಮಾರುಕಟ್ಟೆಯಿಂದ ಹಲವು ಕಡೆಗಳಿಗೆ ದೊಡ್ಡ ಮಟ್ಟದಲ್ಲಿ ಮಾಂಸ ಸರಬರಾಜಾಗುತ್ತದೆ. ಅಲ್ಲಿಯೂ ಕಬಾಬ್ ಅಂಗಡಿಗೆ ಚಿಕನ್ ಬೇಕು ಎಂದು ಕೇಳಿದಾಗ, ಅಲ್ಲಿ ಒಬ್ಬೊಬ್ಬರು ಒಂದೊಂದು ದರ ಹೇಳಿದರು. ಯಾವಾಗ ನಾವು 50 ರೂಪಾಯಿಗೆ ಚಿಕನ್ ಸಿಗುತ್ತೆ ಎಂದು ಹೇಳಿದಾಗ, ಓ ಅಲ್ಲಿ ಸಿಗುತ್ತೆ ನೋಡಿ ಎಂದು ವಿಳಾಸ ತೋರಿಸಿದರು. ಆಗ ವಿಳಾಸಕ್ಕೆ ತೆರಳಿ, ವಿಧವಿಧ ಮಾಂಸದ ತುಂಡು ಮಾಡುತ್ತಿದ್ದ ವ್ಯಕ್ತಿಯನ್ನ ಮಾತನಾಡಿಸಿದಾಗ ಆತ ನಾಜೂಕಾಗಿ ಎಲ್ಲವನ್ನೂ ಹೇಳಲು ಶುರು ಮಾಡಿದ. “40 ರೂಪಾಯಿಗೆ ಒಂದು ಕೆಜಿ ಕೋಳಿ ಮಾಂಸ ಸಿಗುತ್ತೆ. ನಾಳೆ ಬೆಳಗ್ಗೆ ಬನ್ನಿ. ನೂರಾರು ಕೆಜಿ ಸತ್ತ ಕೋಳಿಯ ಮಾಂಸಕ್ಕೆ ಬೇಡಿಕೆ ಇದೆ. ಒಂದೊಂದು ಹೋಟೆಲಿಗೂ 50-60 ಕೆಜಿ ಕೊಡುತ್ತೇವೆ” ಎಂದು ಹೇಳಿದ್ದಾನೆ.
ಪ್ರತಿದಿನ 300, 400 ಕೆಜಿ ಬರುತ್ತೆ. ಬೋಗ್ ರಾಜ್ ಫ್ಯಾಕ್ಟರಿಯಿಂದ, ಕೋಲಾರ್ ರಸ್ತೆಯಿಂದ ಈ ಕೋಳಿಗಳು ಬರುತ್ತೆ. ಕೋಳಿ ಬಾಡಿ 40 ರೂಪಾಯಿಗೆ ಒಂದು ಕೆಜಿ ಸಿಗುತ್ತೆ. ಕಟ್ ಮಾಡಿ ತೋರಿಸ್ತೀನಿ ನೋಡಿ. ನೋಡೋಕೆ ಸತ್ತ ಹಾಗೆ ಕಾಣುತ್ತೆ ಕಟ್ ಮಾಡಿದ ಬಳಿಕ ಗೊತ್ತಾಗಲ್ಲ. ಬೇಕಿದ್ದರೆ ಈ ಮಾಂಸದ ಜೊತೆಗೆ ಸ್ವಲ್ಪ ತಾಜಾ ಮಾಂಸವನ್ನು ಮಿಕ್ಸ್ ಮಾಡಿ ಏನೂ ಗೊತ್ತಾಗಲ್ಲ. 300 ಕೆಜಿ ಏನು ಎಷ್ಟು ಬೇಕಾದರು ಮಾಂಸ ಸಿಗುತ್ತೆ ಎಂದಿರುವುದು ರಹಸ್ಯ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ.
ಅಷ್ಟೇ ಅಲ್ಲದೆ ಸತ್ತ ಕೋಳಿ ಎಂದು ಜನರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಏನೂ ತಿಳಿಯಲ್ಲ, ಸತ್ತ ಕೋಳಿ ಮಾಂಸದ ಜೊತೆ ತಾಜಾ ಕೋಳಿ ಮಾಂಸ ಸೇರಿಸಿ ಮಾರಾಟ ಮಾಡುತ್ತೇವೆ. ನಿಮಗೆ ಎಷ್ಟು ಕೆ.ಜಿ ಮಾಂಸವಾದರೂ ಸಿಗುತ್ತೆ. ಹೀಗೆ ಮಿಶ್ರಣ ಮಾಡಿ ಕೊಟ್ಟರೆ ಯಾರಿಗೂ ತಿಳಿಯುವುದಿಲ್ಲ. ರುಚಿಯಲ್ಲಿ ಏನು ವ್ಯತ್ಯಾಸ ಬರಲ್ಲ. ಶೇ.10 ಬೇರೆ ರೀತಿ ಅನಿಸಬಹುದು. ಅದಕ್ಕೆ ವೆನಿಗರ್ ಅಲ್ಲಿ ಚಿಕನ್ ತೊಳೆದು, ಉಪ್ಪು ಖಾರ ಚೆನ್ನಾಗಿ ಹಾಕಿದರೆ ಗೊತ್ತಾಗಲ್ಲ. ಬೆಳಗ್ಗೆ ಬಂದು ನೋಡಿ ಒಬ್ಬೊಬ್ರು 50ರಿಂದ 60 ಕೆಜಿ ಸತ್ತ ಕೋಳಿ ಮಾಂಸ ತೆಗೆದುಕೊಂಡು ಹೋಗುತ್ತಾರೆ ಎಂದು ಸತ್ಯಾಂಶ ಬಾಯಿಬಿಟ್ಟಿದ್ದಾನೆ.
ಯಾವ ಭಯವೂ ಇಲ್ಲದೇ ನಮಗೆ ಮಾರಾಟ ಆಗಬೇಕಷ್ಟೇ ಎಂದು ವ್ಯಾಪಾರಿಗಳು, ದಂಧೆ ನಡೆಸುವವರು ಸತ್ತು ಒಂದೆರಡು ದಿನ ಆದ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಅಂಗಡಿಯವರು ಕಡಿಮೆ ಹಣಕ್ಕೆ ಕೋಳಿ ಸಿಗುತ್ತೆ ಅಂತ ತಂದು ಮಾರುತ್ತಾರೆ. ಕೂಡಲೇ ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಿ, ಈ ರೀತಿ ಜನರ ಆರೋಗ್ಯಕ್ಕೆ ಮಾರಕವಾಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
https://www.youtube.com/watch?v=ru7PDerT2bM