– ಆರೋಪಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿದ ಒತ್ತಡ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ (Mangaluru) ಗೋಮಾಂಸ ಮಾಫಿಯಾ ಜೋರಾಗಿದೆ. ನಗರದ ಮಧ್ಯೆಯೇ ಅಕ್ರಮ ಗೋಮಾಂಸ ಸಾಗಾಟ ಆಗುತ್ತಿದ್ದು, ಕಾನೂನಿನ ಭಯವೇ ಇಲ್ಲವಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಗೋಮಾಂಸ ಮಾಫಿಯಾ ನಿಲ್ಲದೇ ಹೋದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಒಂದೇ ಒಂದು ಅಧಿಕೃತ ಗೋ ಕಸಾಯಿಖಾನೆ ಇಲ್ಲ. ಆದರೂ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾತ್ರ ನಿರಂತರವಾಗಿ ನಡೆಯುತ್ತಿದೆ. ನಗರದ ಮಧ್ಯೆ ಗೋಮಾಂಸ ಸಾಗಾಟ ಮಾಡಿ ಕಟುಕರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ 5 ಕಡೆಗಳಲ್ಲಿ ಅಕ್ರಮ ಗೋಮಾಂಸ ಸಾಗಾಟವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪತ್ತೆ ಹಚ್ಚಿ, ಪೊಲೀಸರಿಗೆ ತಿಳಿಸಿದ್ದರು. ಇದನ್ನೂ ಓದಿ: ಬಾಂಬ್ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್ – ದೈತ್ಯ ಮಿಸೈಲ್ ಸಿದ್ಧಪಡಿಸಿದ ಇರಾನ್
ಪೊಲೀಸರು 1 ಟನ್‌ಗೂ ಅಧಿಕ ಗೋಮಾಂಸ ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲದೇ ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ, ಫರಂಗಿಪೇಟೆ ಮುಂದಾದ ಕಡೆಗಳಲ್ಲಿ ಅಕ್ರಮ ಗೋ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ. ಇಲ್ಲಿಂದಲೇ ಎಲ್ಲಾ ಕಡೆಗಳಿಗೂ ರಾಜಾರೋಷವಾಗಿ ನಗರದ ನಡುವೆಯೇ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ. ಅಕ್ರಮ ಗೋಮಾಂಸ ಸಾಗಾಟಗಾರರಿಗೆ ಯಾರು ರಕ್ಷಣೆ ನೀಡುತ್ತಿರುವುದು ಎನ್ನುವ ಪ್ರಶ್ನೆ ಎದ್ದಿದೆ.
ಜಿಲ್ಲೆಯಾದ್ಯಂತ ಕಾನೂನು ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಗೋಮಾಂಸ ಸಾಗಾಟ ಮಾಡಿ ಸಿಕ್ಕಿಬಿದ್ದರೂ, ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳತ್ತಿಲ್ಲ. ಇತ್ತೀಚಿಗೆ ಮಂಗಳೂರು ಹೊರವಲಯದ ಸುರಲ್ಪಾಡಿ ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋಸಾಗಾಟದ ವಾಹನವನ್ನು ಸಿನಿಮೀಯ ರೀತಿಯಲ್ಲಿ ಅಡ್ಡ ಹಾಕಿದ್ದರು. ಇದನ್ನೂ ಓದಿ: ಪತ್ನಿ ಕೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಹಂತಕ – ಕಾರಣ ಬಾಯ್ಬಿಡದ ಟೆಕ್ಕಿ
ಈ ವೇಳೆ ಸುಮಾರು 25 ಗೋವುಗಳನ್ನು ಅಮಾನುಷವಾಗಿ ಸಾಗಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದ್ದು, ಸಾಗಾಟಗಾರರು ಈ ವೇಳೆ ಓಡಿ ಪರಾರಿಯಾಗಿದ್ದರು. ಬಳಿಕ ಬಜಪೆ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿದ್ದರು. ಜಿಲ್ಲೆಯಾದ್ಯಂತ ನಡೆಯುತ್ತಿರುವ ಗೋಮಾಂಸ ಸಾಗಾಟ ವಾಹನ, ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳ ಮುಟ್ಟುಗೋಲು ಹಾಕಿಕೊಳ್ಳಿ. ನಮ್ಮನ್ನು ಕೆಣಕಬೇಡಿ, ಅಕ್ರಮ ಗೋಮಾಂಸ ಸಾಗಾಟ ನಿಲ್ಲದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ
ಒಟ್ಟಿನಲ್ಲಿ, ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಾಟ, ಗೋಮಾಂಸ ಸಾಗಾಟ ಹೆಚ್ಚಿದೆ. ಪೊಲೀಸರ ಭಯ ಇಲ್ಲದಂತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆದರೂ ಪೊಲೀಸರು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.