ನವದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲು ಹೈಕಮಾಂಡ್ ನನಗೆ ಸೂಚಿಸಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಮನವೊಲಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಅವರು ಪಕ್ಷದಲ್ಲಿ ಯಾರ ಮೇಲೂ ಮುನಿಸಿಕೊಂಡಿಲ್ಲ. ಅವರಿಗೆ ಸಾಕಷ್ಟು ಅನುಭವವಿದ್ದು, ರಾಜಕೀಯ ಬೆಳವಣಿಗೆಯ ಬಗ್ಗೆ ಅರಿತುಕೊಂಡಿದ್ದಾರೆ. ಹೀಗಾಗಿ ನಾನು ಅವರಿಗೆ ಏನನ್ನು ಹೇಳುವ ಅವಶ್ಯಕತೆ ಇಲ್ಲ. ಅವರು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ನಾಯಕರು ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
Advertisement
ಮಾಧ್ಯಮಗಳಲ್ಲಿ ಬಂದ ಕೆಲವು ಸುದ್ದಿಗಳ ಕುರಿತಾಗಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುವುದಾಗಿ ಹೇಳಿಕೆ ನೀಡಿದ್ದೆ ಅಷ್ಟೇ. ಆದರೆ ಈಗ ಯಾವುದೇ ದ್ವಂದ್ವಗಳಿಲ್ಲ ಎಂದು ಹೇಳಿದರು.
Advertisement
Advertisement
ಅವಧಿಪೂರ್ವ ಚುನಾವಣೆ: ಇತ್ತೀಚಿನ ಬೆಳವಣಿಗೆ ನೋಡಿದರೆ ಬಿಜೆಪಿಯು ಅವಧಿ ಪೂರ್ವ ಚುನಾವಣೆ ನಡೆಸುವ ಚಿಂತನೆ ಇದೆ. ಅಲ್ಲದೇ ಮಹಾರಾಷ್ಟ್ರ ಸೇರಿದಂತೆ ಕೆಲವು ಸಣ್ಣ ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಅದೇ ವೇಳೆ ಲೋಕಸಭೆ ಚುನಾವಣೆ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಅವಧಿ ಪೂರ್ವ ಚುನಾವಣೆ ನಡೆಸುವ ಮೂಲಕ ಬಿಜೆಪಿ ತನ್ನ ಹಿತಾಸಕ್ತಿ ಸಾಧನೆಗೆ ಯೋಜನೆ ರೂಪಿಸಿದೆ ಎಂದು ಅವರು ಆರೋಪಿಸಿದರು.
Advertisement
ಬಿಜೆಪಿ ಯೋಜನೆಯಂತೆ ಅವಧಿ ಪೂರ್ವ ಚುನಾವಣೆ ನಡೆಯಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಅತ್ಯಂತ ಹಿನ್ನಡೆ ಅನುಭವಿಸಿದೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈಡೇರಿಸಿಲ್ಲ. ಹೀಗಾಗಿ ದೇಶದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದ್ದಿದ್ದು, ಅವಧಿ ಪೂರ್ವ ಚುನಾವಣೆಗೆ ಅವರು ಮುಂದಾಗುವುದು ಅನುಮಾನ ಎಂದು ಅವರು ಆರೋಪಿಸಿದರು.