ಭಾರತೀಯ ಸಿನಿಮಾ ರಂಗದ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್ ಸದ್ದಿಲ್ಲದೇ ಸೆಟ್ಟೇರುತ್ತಿದೆ. ನಾಳೆಯಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದ್ದು, ಮುಹೂರ್ತದ ದಿನದಿಂದಲೇ ಚಿತ್ರೀಕರಣಕ್ಕೂ ಹೊರಡಲಿದೆಯಂತೆ ಚಿತ್ರತಂಡ. ಇಳಯರಾಜ ಅವರ ಪಾತ್ರವನ್ನು ಧನುಷ್ (Dhanush) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತವಾಗಿ ಮಾಹಿತಿ ಲಭ್ಯವಿಲ್ಲ.
ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು.
ಇದೀಗ ಸಿಗುತ್ತಿರುವ ಮಾಹಿತಿಯ ಪ್ರಕಾರ, ಇಳಯರಾಜ ಅವರ ಬಯೋಪಿಕ್ ಅನ್ನು ಸ್ವತಃ ಯುವನ್ ಶಂಕರ್ ರಾಜ್ (Yuvan Shankar Raj) ಅವರೇ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಾನಾ ನಿರ್ದೇಶಕರ ಜೊತೆಯೂ ಯುವನ್ ಮಾತನಾಡಿದ್ದಾರೆ ಎನ್ನುವುದು ವರ್ತಮಾನ.
ಈಗಾಗಲೇ ಧನುಷ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ಒಂದು ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಅದೇ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ನಡುವೆಯೇ ಅವರು ಇಳಯರಾಜ ಅವರ ಚಿತ್ರಕ್ಕೂ ಕಾಲ್ ಶೀಟ್ ನೀಡಲಿದ್ದಾರಂತೆ.