ಅಸ್ಸಾಂ: ಐಐಟಿಯಲ್ಲಿ ಪದವಿ ಓದಿ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, ಪ್ರವಾಹ ಪೀಡಿತ ಪ್ರದೇಶದಲ್ಲಿ ವಿದ್ಯಾಭ್ಯಾಸದಿಂದ ವಂಚಿತರಾದ ಮಕ್ಕಳಿಗಾಗಿ ಶಾಲೆ ನಿರ್ಮಿಸಿ, ಅವರ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಎಂಜಿನಿಯರ್ ಒಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಹೌದು. ಮಹಾರಾಷ್ಟ್ರದ ಸತಾರಾ ಮೂಲದ ಎಂಜಿನಿಯರ್ ಬಿಪಿನ್ ಧಾನೆ(29) ಬಡ ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ತಳಹದಿ ಕಲ್ಪಿಸಿಕೊಟ್ಟಿದ್ದಾರೆ. ಬಿಪಿನ್ ಧಾನೆ ಅವರ ತಂದೆ-ತಾಯಿಯ ಕನಸಿನಂತೆ 2013ರಲ್ಲಿ ಐಐಟಿ ಖರಗ್‍ಪುರದಲ್ಲಿ ಪದವಿ ಪಡೆದು, ಸಿಂಗಾಪೂರದ ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗವನ್ನೂ ಪಡೆದಿದ್ದರು. ಆದರೆ ಕೈತುಂಬ ಸಂಬಳ ಬರುವ ಕೆಲಸವಿದ್ದರೂ, ಆ ಕೆಲಸದಲ್ಲಿ ನೆಮ್ಮದಿ ಇಲ್ಲ ಎಂದು ಎರಡೇ ವರ್ಷದಲ್ಲಿ ಅದನ್ನು ಬಿಟ್ಟು ಊರಿಗೆ ಮರಳಿದರು.
Advertisement
Advertisement
ಸ್ವದೇಶಕ್ಕೆ ಮರಳಿದ ಬಳಿಕ ಅಸ್ಸಾಂನಲ್ಲಿನ ಪ್ರವಾಹ ಪೀಡಿತ ದ್ವೀಪ ಜಿಲ್ಲೆಯಾದ ಮಜೂಲಿಗೆ ಬಂದು, ಅಲ್ಲಿನ ಮಕ್ಕಳಿಗೆಂದೇ 2017ರಲ್ಲಿ “ದ ಹಮ್ಮಿಂಗ್‍ಬರ್ಡ್ ಸ್ಕೂಲ್” ಕಟ್ಟಿದರು. ತಾವು ಉದ್ಯೋಗದಲ್ಲಿದಾಗ ಉಳಿತಾಯ ಮಾಡಿಟ್ಟಿದ್ದ ಹಣದಲ್ಲಿ ಬಡ ಮಕ್ಕಳ ಭವಿಷ್ಯ ಕಟ್ಟಲು ಮುಂದಾದರು. ಆಗ ಅಲ್ಲಿನ ಜನ ಜಾಗ, ಬಿದಿರು, ಮರ ಇತ್ಯಾದಿ ಎಲ್ಲ ಅಗತ್ಯ ವಸ್ತುಗಳನ್ನು ನೀಡಿ ಬಿಪಿನ್ ಅವರಿಗೆ ಶಾಲೆ ನಿರ್ಮಿಸಲು ಕೈಜೋಡಿಸಿದರು.
Advertisement
Advertisement
ನಂತರ ಈ ವಿಷಯ ತಿಳಿದು ಅನೇಕ ಸರ್ಕಾರೇತರ ಸಂಸ್ಥೆಗಳು ಕೂಡ ಬಿಪಿನ್ ನೆರವಿಗೆ ನಿಂತವು. ಮೊದಲು 2017ರಲ್ಲಿ ಪುಟ್ಟದಾಗಿ ಶುರುವಾದ ಈ ಶಾಲೆಯಲ್ಲಿ ಸದ್ಯ 20 ಶಿಕ್ಷಕರು ಹಾಗೂ 10 ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಸುಮಾರು 240 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಾಗೆಯೇ ಇಲ್ಲಿ ಕೇವಲ ಪಾಠವಷ್ಟೇ ಅಲ್ಲದೆ, ಅಲ್ಲಿನ ಬುಡಕಟ್ಟು ಸಂಪ್ರದಾಯ, ಕ್ರೀಡೆ, ಇತರೇ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಈಗಿನ ಕಾಲದಲ್ಲಿ ಕೈತುಂಬ ಸಂಬಳ ಸಿಕ್ಕರೆ ನಮ್ಮ ಪಾಡಿಗೆ ನಾವಿರೋಣ ಎನ್ನುವ ಜನಗಳೇ ಹೆಚ್ಚು. ಆದ್ರೆ ಇಂತಹ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥವಾಗಿ ಬಡ ಮಕ್ಕಳ ಜೀವನಕ್ಕೆ ನೆರವಾಗಿರುವ ಬಿಪಿನ್ ಅವರ ಸಾಧನೆ ಎಲ್ಲರ ಮನ ಗೆದ್ದಿದೆ.