ಚಂಡೀಗಢ: ಉತ್ತರ ಭಾರತದ ಹಲವೆಡೆ ತಾಪಮಾನ ಹೆಚ್ಚಳವಾಗಿದೆ. ಈ ನಡುವೆ ಬಿಸಿಲಿನ ತಾಪದಿಂದ ಬೇಸತ್ತ ಅಮೃತಸರದ (Amritsar) ಐಐಎಮ್‍ನ (The Indian Institute Of Management) ವಿದ್ಯಾರ್ಥಿಗಳು (Students) ಹಾಸ್ಟೆಲ್‍ನಲ್ಲಿ ಎಸಿ ಅಳವಡಿಸುವಂತೆ ಆಗ್ರಹಿಸಿ ಮೆಸ್‍ನಲ್ಲಿ ವಿನೂತನವಾಗಿ `ನಿದ್ರಾʼ ಪ್ರತಿಭಟನೆ (Sleep Protest) ನಡೆಸಿದ್ದಾರೆ.
ವಿದ್ಯಾರ್ಥಿಗಳ ಈ ಪ್ರತಿಭಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವಿದ್ಯಾರ್ಥಿಗಳು ಕುರ್ಚಿ ಮೇಲೆ ಕುಳಿತು, ಟೇಬಲ್ ಮೇಲೆ ತಲೆ ಇರಿಸಿಕೊಂಡು ನಿದ್ರಿಸುವ ರೀತಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿರುವುದು ಕಂಡುಬಂದಿದೆ. ಹಾಸ್ಟೆಲ್‍ನ ಸೌಲಭ್ಯಗಳನ್ನು ಒದಗಿಸುವ ಹಾಗೂ ನಿರ್ವಹಣೆಯ ವೈಫಲ್ಯದ ವಿರುದ್ಧ ಮೌನ ಪ್ರತಿಭಟನೆಯ ಸಂಕೇತವಾಗಿ ವಿದ್ಯಾರ್ಥಿಗಳು ಈ ರೀತಿ ಪ್ರತಿಭಟಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ವೃದ್ಧನ ಜೊತೆ ಮದುವೆ ಮಾಡಲು ಅಪ್ರಾಪ್ತ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಿದ ತಂದೆ!
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗೆ ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರೊಬ್ಬರು, ಯಾವುದೇ ಆಕ್ರಮಣಕಾರಿ ವಿಧಾನಗಳನ್ನು ಬಳಸದೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು, ಇತ್ತೀಚಿನ ದಿನಗಳಲ್ಲಿ ಫ್ಯಾನ್‍ಗಳು ಪರಿಣಾಮಕಾರಿಯಾಗಿ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಕೂಲರ್ ಮತ್ತು ಎಸಿಗಳ ವ್ಯವಸ್ಥೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷವೂ ವಿದ್ಯಾರ್ಥಿಗಳು ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಹಾಸ್ಟೆಲ್‍ನ್ನು ತಾತ್ಕಾಲಿಕ ವಸತಿಗೃಹದಲ್ಲಿ ನಡೆಸಲಾಗುತ್ತಿದ್ದು, ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಈ ಸಮಸ್ಯೆ ಬಗೆಹರಿಯಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ತೀವ್ರವಾಗಿ ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಕ್ರಿಯಿಸಿದ್ದು, 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ತಲುಪಿದ ಈ ಸಮಯದಲ್ಲಿ ಎಸಿ ವ್ಯವಸ್ಥೆ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಮೆಂಟ್ ಮಾಡಿದ್ದಾರೆ.
ಅಮೃತಸರದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಶಾಖದ ಅಲೆಯ ಅನುಭವವಾಗುತ್ತಿದೆ. ಕಳೆದ 2 ದಿನಗಳಿಂದ ಅಮೃತಸರದಲ್ಲಿ ಗರಿಷ್ಠ ತಾಪಮಾನ 44.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ನೀರಿಗೆ ಹಾಹಾಕಾರ – ಜಲಮಂಡಳಿ ಕಚೇರಿ ಧ್ವಂಸಗೊಳಿಸಿದ ಪ್ರತಿಭಟನಾಕಾರರು