ಬೆಂಗಳೂರು: ಇಂಧನ ಇಲಾಖೆಯ (Energy Department) ಹೊರ ಗುತ್ತಿಗೆ ಸಿಬ್ಬಂದಿಗೆ ಏಜೆನ್ಸಿ ಗುತ್ತಿಗೆದಾರರು ಕಿರುಕುಳ ನೀಡುತ್ತಿದ್ದಾರೆ. ತಿಂಗಳ ವೇತನದಲ್ಲಿಯೂ (Salary) ಕಮೀಷನ್ (Commission) ಕೇಳುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಇಂಧನ ಇಲಾಖೆಯ ಕೆಪಿಟಿಸಿಎಲ್, ಎಸ್ಕಾಂನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ತಿಂಗಳಿಗೆ ಸಿಗುವುದು 15 ಸಾವಿರ ರೂ. ಅಲ್ಪ ಸಂಬಳದಲ್ಲಿಯೇ ಜೀವನ ಸಾಗಿಸೋದು ಕಷ್ಟ. ಹೀಗಿರುವಾಗ ದುಡ್ಡಿನಲ್ಲಿ ತಿಂಗಳು ತಿಂಗಳು 2 ಸಾವಿರ ರೂ. ನಿಂದ ಹಿಡಿದು 5 ಸಾವಿರದವರೆಗೂ ಕಮೀಷನ್ ಕೇಳುತ್ತಿದ್ದಾರೆ.
ಸಾಮಾನ್ಯವಾಗಿ ಏಜೆನ್ಸಿ ಅಥವಾ ಗುತ್ತಿಗೆದಾರರಿಗೆ ಸಿಬ್ಬಂದಿಯನ್ನು ನೀಡಿದ್ದಕ್ಕೆ ಸರ್ಕಾರದಿಂದ ಹಣ ಪಾವತಿಯಾಗಿರುತ್ತದೆ. ಆದರೆ ಕೆಲ ಏಜೆನ್ಸಿಯವರು ಸರ್ಕಾರದ ದುಡ್ಡು ಪಡೆದು ನಮ್ಮ ಬಳಿಯೂ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಸಿಬ್ಬಂದಿ ಆರೋಪ. ಇದನ್ನೂ ಓದಿ: ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು
ವಿಚಿತ್ರ ಅಂದರೆ ಈ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ಮಾಡಿಕೊಂಡರೆ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗುತ್ತೆ ಎಂದು ಇಲಾಖೆಯೇ ವರದಿ ಕೊಟ್ಟಿದೆ. ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಾರ್ಮಿಕ ಸಂಘದ ಬೆಟ್ಟೇಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಗುತ್ತಿಗೆದಾರರು, ಏಜೆನ್ಸಿ ಪರ ನಿಲ್ಲದೇ ಇಂಧನ ಇಲಾಖೆ ಈ ವಿಚಾರ ದಲ್ಲಿ ಸಿಬ್ಬಂದಿ ಪರ ನಿಲ್ಲಬೇಕಾಗಿದೆ.