ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಬೆಳವಣಿಗೆ ನಡೆಯುತ್ತಿದ್ದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಚಿವರ ಜೊತೆ ನಡೆಸಿದ ಅನೌಪಚಾರಿಕ ಸಭೆಯಲ್ಲಿ ತಿಳಿಸಿದ್ದಾರೆ.
ನನಗೇನು ಸ್ವಾರ್ಥವಿಲ್ಲ, ಅಧಿಕಾರದ ಆಸೆಯಿಲ್ಲ, ಸಿಎಂ ಸ್ಥಾನದಲ್ಲಿ ಇರುವುದಿಲ್ಲ. ಜಾತ್ಯಾತೀತ ಶಕ್ತಿಗಳು ಉಳಿಯಬೇಕು ಎನ್ನುವ ಕಾರಣಕ್ಕಷ್ಟೇ ಈ ಜವಾಬ್ದಾರಿ ಹೊತ್ತಿದ್ದೇನೆ. ಫ್ರಾಂಕ್ ಆಗಿ ಮಾತಾಡಿ, ನಿಮಗೆ ಇಷ್ಟ ಇಲ್ಲ ಅಂದರೆ ಸಿಎಂ ಆಗಿ ಮುಂದುವರಿಯಲ್ಲ ಎಂದು ಕುಮಾರಸ್ವಾಮಿ ಅವರು ಅನೌಪಚಾರಿಕ ಸಭೆಯಲ್ಲಿ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಸಭೆಯಲ್ಲಿ ಆಗಿದ್ದೇನು?:
ನೀವು ಹೇಳಿ, ನಾನು ಸಿಎಂ ಆಗಿ ಮುಂದುವರಿಯಸಬೇಕೇ? ಬೇಡವೇ? ಯಾವುದೇ ಅಂಜಿಕೆ ಬೇಡ ಬಾಯಿ ಬಿಟ್ಟು ಹೇಳಿ ಎಂದು ಕುಮಾರಸ್ವಾಮಿಯವರು ಸಚಿವರಲ್ಲಿ ಕೇಳಿದ್ದಾರೆ. ಸಿಎಂ ರಾಜೀನಾಮೆ ವಿಚಾರ ಹೇಳಿದ ಕೂಡಲೇ ಶಾಕ್ ಆದ ಸಚಿವರು ಮೌನಕ್ಕೆ ಜಾರಿದ್ದಾರೆ.
Advertisement
ಶಾಕಿಂಗ್ ಪರಿಸ್ಥಿತಿಯನ್ನು ತಿಳಿಗೊಳಿಸಿದ ಡಿಸಿಎಂ ಪರಮೇಶ್ವರ್ ಅವರು, ಸೋಲು ಗೆಲುವು ಎಲ್ಲಾ ಸಹಜ. ನೀವು ಸ್ಥಾನ ಬಿಡುವ ಬಗ್ಗೆ ಯೋಚಿಸುವುದು ಬೇಡ. ಒಳ್ಳೆಯ ಆಡಳಿತ ಕೊಡೋಣ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮುಂದುವರಿಯಿರಿ. ಮಾಜಿ ಸಿಎಂ ಸಿದ್ದರಾಮಯ್ಯ ನಿಮಗೆ ಬೆಳಗ್ಗೆ ಕರೆ ಮಾಡಿ ಮಾತನಾಡುವಾಗ ನಾವೆಲ್ಲಾ ಜೊತೆಯಲ್ಲೇ ಇದ್ದೇವು. ಅವರ ಅಭಿಪ್ರಾಯ, ನಮ್ಮ ಅಭಿಪ್ರಾಯ ಒಂದೇ. ಸರ್ಕಾರ ಸುಭದ್ರವಾಗಿರಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಹಜ. ಆದರೆ ಶಾಸಕರಿಗೆ ಹೆಚ್ಚಿನ ಸಮಯ ಕೊಡಿ. ಆಗ ಎಲ್ಲವೂ ಸರಿಯಾಗಲಿದೆ ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
Advertisement
ಡಿಸಿಎಂ ಪರಮೇಶ್ವರ್ ಹೇಳಿಕೆ ಸಚಿವರು ಕೂಡ ಧ್ವನಿಗೂಡಿಸಿದರು. ಅಷ್ಟೇ ಅಲ್ಲದೆ ನೀವೇ ಅಧಿಕಾರದಲ್ಲಿ ಮುಂದುವರಿಯಬೇಕು. ರಾಜೀನಾಮೆ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರೆ ಮಾಡಿ, ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಫಲಿತಾಂಶದಿಂದ ಮೈತ್ರಿ ಮುರಿಯುವುದು ಬೇಡ. ಕಾಂಗ್ರೆಸ್ ನಾಯಕರು ನಿಮ್ಮ ನೇತೃತ್ವದಲ್ಲಿ ಮುಂದುವರಿಯುತ್ತಾರೆ. ಫಲಿತಾಂಶದಿಂದ ಆತಂಕ ಬೇಡ. ಬೇರೆ ಯಾವುದೇ ನಿರ್ಧಾರ ತಗೆದುಕೊಳ್ಳಬೇಡಿ ಎಂದು ರಾಹುಲ್ ಗಾಂಧಿ ಧೈರ್ಯ ತುಂಬಿದ್ದಾರೆ ಎಂದು ಜೆಡಿಎಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ರಾಹುಲ್ ಗಾಂಧಿಯವರು ತಾವು ಫೋನ್ ಮಾಡಿದ್ದಲ್ಲದೇ ರಾಜ್ಯ ಕಾಂಗ್ರೆಸ್ ನಾಯಕರ ಮೂಲಕವೂ ಕುಮಾರಸ್ವಾಮಿ ಅವರಿಗೆ ಸಮಾಧಾನ ಹೇಳಿಸಿದ್ದಾರೆ. ರಾಹುಲ್ ಗಾಂಧಿಯವರ ಸೂಚನೆಯಂತೆ ಕಾಂಗ್ರೆಸ್ ನಾಯಕರು ಇಂದಿನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ಧೈರ್ಯ ತುಂಬಿದ್ದಾರೆ.
ನೀವೆಲ್ಲ ಹೇಗೆ ಹೇಳುತ್ತಿರೋ ಹಾಗೇ ನಡೆದುಕೊಳ್ಳುತ್ತೇನೆ. ಆದರೆ ಇವತ್ತು ನೀವೇ ಸಿಎಂ ಎಂದು ಹೇಳುತ್ತಿರಿ. ನಾಳೆ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಎಂದು ನಿಮ್ಮವರು ಹೇಳುತ್ತಾರೆ. ಆ ರೀತಿ ಆದರೆ ಆಡಳಿತ ಮಾಡುವುದು ಕಷ್ಟ. ಇಬ್ಬರಿಗೂ ಮೈತ್ರಿ ಅನಿವಾರ್ಯವಾಗಿದೆ. ಹಾಗಂತ ಸ್ವಾಭಿಮಾನ ಕೆಡಿಸಿಕೊಂಡು ಇರು ಅಂದ್ರೆ ಹೇಗೆ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಚಿವರನ್ನು ಪ್ರಶ್ನಿಸಿದ್ದಾರೆ
ಸಿಎಂ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇನ್ನುಮುಂದೆ ಹಾಗೆಲ್ಲ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.