– ವಾಹನಕ್ಕೆ ಕಸ ಹಾಕದವರಿಗೆ ಮನೆ ಮುಂದೆ ಕಸ ಸುರಿದು ಛೀಮಾರಿ
– ಜಿಬಿಎ ವ್ಯಾಪ್ತಿಯಲ್ಲಿ 2 ಲಕ್ಷ ರೂ. ದಂಡ ವಸೂಲಿ
ಬೆಂಗಳೂರು: ಕಸದ ಆಟೋಗೆ ಕಸ (Garbage) ಹಾಕದೇ ರಸ್ತೆಗೆ ಎಸೆಯುತ್ತಿದ್ದ ಬೆಂಗಳೂರಿಗರಿಗೆ ಬಿಎಸ್‌ಡಬ್ಲ್ಯೂಎಂಎಲ್ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ರಸ್ತೆಗೆ ಕಸ ಎಸೆದವರ ಮನೆ ಮುಂದೆನೇ ಆಟೋದಲ್ಲಿ ಕಸ ಸುರಿದು ಛೀಮಾರಿ ಹಾಕಿದ್ದಾರೆ. ಯಾರೇ ರಸ್ತೆಗೆ ಕಸ ಎಸೆದ್ರೂ ಇನ್ಮುಂದೆ ನಿಮ್ಮ ಮನೆ ಕಸದ ರಾಶಿ ಜೊತೆಗೆ ದಂಡ ಕೂಡ ಬೀಳಲಿದೆ. ರಸ್ತೆಗೆ ಕಸ ಎಸೆದವರ ಮನೆ ಮುಂದೆ ಕಸದ ರಾಶಿ ಹೇಗಿತ್ತು ನೀವೆ ನೋಡಿ.
ಹೌದು. ಬೆಂಗಳೂರು ನಗರದಲ್ಲಿ (Bengaluru City) ಮನೆ ಮುಂದೆ ಕಸದ ಆಟೋ ಬಂದರೂ ಕಸವನ್ನ ಆಟೋಗೆ ಹಾಕದೆ, ರಸ್ತೆಗೆ ಎಸೆಯುತ್ತಿದ್ದ ಪ್ರಕರಣ ಹೆಚ್ಚಾಗುತ್ತಲೇ ಇದೆ. ಇದರಿಂದ ನಗರದ ಸೌಂದರ್ಯ ಹಾಳಾಗುವುದಲ್ಲದೇ ಕಸದ ಬ್ಲಾಕ್ ಸ್ಪಾಟ್ ಸೃಷ್ಟಿ ಆಗುತ್ತಾ ಇದೆ. ಹೀಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆ ರಸ್ತೆಗೆ ಕಸ ಹಾಕಿದವರಿಗೆ ಬುದ್ಧಿ ಕಲಿಸುವಂತಹ ಕೆಲಸ ಮಾಡಿದೆ. ಯಾರು ರಸ್ತೆಗೆ ಕಸ ಹಾಕ್ತಾರೆ ಅವರ ವಿಡಿಯೋ ಮಾಡಿಕೊಂಡು, ಸಿಸಿಟಿವಿ ಪರಿಶೀಲಿಸಿ ಅವರ ಮನೆ ಮುಂದೆ ಕಸ ಸುರಿದು ರಸ್ತೆಗೆ ಕಸ ಹಾಕಿದವರ ಮರ್ಯಾದೆ ತೆಗೆದು ಛೀಮಾರಿ ಹಾಕಿದ್ದಾರೆ.
ಇನ್ನು, ಬೆಂಗಳೂರಿನ ದತ್ತಾತ್ರೇಯ ದೇವಸ್ಥಾನದ ರಸ್ತೆ, ಬನಶಂಕರಿ, ಹೊಸಕೆರೆಹಳ್ಳಿ ರಸ್ತೆ, ಮಂಜುನಾಥ ನಗರ, ಪದ್ಮನಾಭನಗರ ಸೇರಿದಂತೆ ಹಲವು ಕಡೆ ರಸ್ತೆ ಕಸ ಸುರಿದವರ ಮನೆ ಮುಂದೆ ಕಸ ಸುರಿಯುವಂತಹ ಕೆಲಸ ಮಾಡಿದ್ದಾರೆ. ಮಲ್ಲೇಶ್ವರಂನ ದತ್ತಾತ್ರೇಯ ಟೆಂಪಲ್ ರಸ್ತೆ ಬಳಿ ಎಷ್ಟು ಬಾರಿ ಅವರಿಗೆ ತಿಳಿ ಹೇಳಿದ್ರು ಅರಿತುಕೊಳ್ಳದೇ ಕಸ ಹಾಕುವಂತಹ ಕೆಲಸ ಮಾಡ್ತಾ ಇದ್ರು. ಇದರಿಂದ ಬೇಸತ್ತು ಹೋದ ಸಿಬ್ಬಂದಿ ಮನೆಮುಂದೆ ಕಸದ ಆಟೋ ತಂದು ಕಸ ಸುರಿದು ರಸ್ತೆಯಲ್ಲಿ ಕಸ ಹಾಕಿದವರಿಗೆ ದಂಡ ಹಾಕಿದ್ದಾರೆ.
ಏನಿದು ಕಸ ಸುರಿಯುವ ಹಬ್ಬ? BSWML ಹೇಳೋದೇನು? 
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ʻಕಸ ಸುರಿಯುವ ಹಬ್ಬʼದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಿಇಒ ಕರೀಗೌಡ ಹೇಳಿದ್ದಾರೆ.
ದಿನನಿತ್ಯ ಆಟೋದ ಮೂಲಕ ಕಸ ಸಂಗ್ರಹಿಸಲಾಗ್ತಿದೆ. ಆದ್ರೆ ಕೆಲವರು ಕಸವನ್ನ ರಸ್ತೆಯಲ್ಲಿ ಎಸೆದು ಹೋಗ್ತಿದ್ದಾರೆ. ಕಸ ಎಸೆದು ಹೋದಂತ 218 ಜನರ ಮನೆ ಮುಂದೆ ಕಸ ಸುರಿದ್ವಿ. ಬೇರೆಯವರ ಮನೆ ಮುಂದೆ ಕಸ ಎಸೆದರೆ ಏನಾಗುತ್ತೆ ಗೊತ್ತಾಗಲಿ ಮನವರಿಕೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ 218 ಪ್ರಕರಣಗಳಲ್ಲಿ 2.80 ಲಕ್ಷ ರೂ. ದಂಡ ವಸೂಲಿ ಮಾಡಿದ್ದೇವೆ. ದಸಯಮಾಡಿ ಕಸವನ್ನ ಆಟೋದವರಿಗೆ ಕೊಡಿ, ಎಲ್ಲೆಂದರಲ್ಲಿ ಕಸ ಎಸೆಯಬೇಡಿ ಅಂತ ತಿಳಿವಳಿಕೆ ನೀಡಿದ್ದಾರೆ.
ಇನ್ನೂ ಇದೇ ಮಾದರಿಯಲ್ಲಿ ಯಾರು ರಸ್ತೆಗೆ ಕಸ ಎಸೆಯುತ್ತಾರೋ ಅವರಿಗೆ ದಂಡ ಹಾಕುವ ಕೆಲಸಕೂಡ ಮಾಡಲಾಗುತ್ತೆ. ಮೊದಲೆಲ್ಲ 500 ರಿಂದ 2 ಸಾವಿರ ರೂಪಾಯಿ ವರೆಗೂ ದಂಡ ಇತ್ತು. ಈಗ ಆ ದಂಡದ ಪ್ರಮಾಣ 5 ರಿಂದ 10 ಸಾವಿರದವರೆಗೂ ವಿಧಿಸುವ ಅವಕಾಶ ಕೂಡ ನಿಯಮದಲ್ಲಿದೆ ಅಂತಾರೆ ಅಧಿಕಾರಿಗಳು.
ಒಟ್ಟಾರೆ, ರಸ್ತೆಗೆ ಕಸ ಸುರಿದವರಿಗೆ ಬುದ್ಧಿ ಕಲಿಸಲು ಕಸ ಹಾಕಿದವರ ಮನೆ ಮುಂದೆ ಕಸ ಸುರಿದು ದಂಡ ಹಾಕುವ ಕಾರ್ಯ ಶುರುವಾಗಿದೆ. ಇನ್ಮುಂದೆ ಯಾರೇ ರಸ್ತೆಗೆ ಕಸ ಸುರಿದ್ರು ಅವರಿಗೆ ಇದೇ ಶಿಕ್ಷೆ ಆಗಲಿದೆ. ಎಲ್ಲರೂ ಕಸದ ಆಟೋಗಳಿಗೆ ಕಸ ನೀಡಬೇಕು ಎಂಬುದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಉದ್ದೇಶ.
 
					



 
		 
		 
		 
		 
		 
		 
		 
		 
		