ಬೆಂಗಳೂರು: ನಾನು ಯಾವತ್ತು ಟಿಪ್ಪು ಜಯಂತಿ ವಿರೋಧ ಮಾಡಿಲ್ಲ. ಇಷ್ಟ ಇಲ್ಲದವರು ಮನೆಯಲ್ಲೇ ಇರುವಂತೆ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಉಪಚುನಾವಣೆಯ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಎಚ್‍ಡಿಕೆ, ನಾನು ಯಾವತ್ತು ಟಿಪ್ಪು ಜಯಂತಿ ವಿರೋಧ ಮಾಡಿಲ್ಲ. ಬಿಜೆಪಿಯವರಿಗೆ ಇಷ್ಟ ಇಲ್ಲ ಅಂದರೆ ಮನೆಯಲ್ಲಿ ಇರಿ. ಅದು ಬಿಟ್ಟು ರಾಜಕೀಯ ಮಾಡಬೇಡಿ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಖಡಕ್ ಆಗಿಯೇ ಹೇಳಿದರು.
ಈ ಹಿಂದೆ ನಮ್ಮ ಪಕ್ಷದ ಕಚೇರಿಯಲ್ಲಿಯೇ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಈ ಕಾರ್ಯಕ್ರಮ ನಡೆಯುತ್ತದೆ. ಸಾರ್ವಜನಿಕ ಆಸ್ತಿಗೆ ಯಾರು ಹಾನಿ ಮಾಡಿದರು ಸಹಿಸುವುದಿಲ್ಲ. ಆದರೆ ಶಾಂತಿಯುತವಾಗಿ ಯಾರು ಬೇಕಾದರೂ ಪ್ರತಿಭಟನೆ ಮಾಡಲಿ. ಶಾಂತಿಗೆ ಭಂಗ ಮಾಡಿದರೆ ಅಂತಹವರನ್ನ ಬಲಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಧಮ್ ಇದ್ರೆ ಬಂಧಿಸಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವೈಫಲ್ಯವಾದ್ರೆ ಸರ್ಕಾರವೇ ನೇರ ಹೊಣೆ: ಆರ್.ಅಶೋಕ್
ಸಮ್ಮಿಶ್ರ ಸರ್ಕಾರದ ಕಾರ್ಯಗಳು ರಾಜ್ಯದ ಜನತೆಗೆ ಇಷ್ಟವಾಗಿದ್ದು, ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಜನ ಆಶೀರ್ವಾದ ಮಾಡಿದ್ದಾರೆ. ಈ ಗೆಲುವಿನಿಂದ ನಾವು ತಲೆ ತಿರುಗಿ ಹೋಗುವುದಿಲ್ಲ. ಮುಂದಿನ ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುವ ಗುರಿ ಇದೆ. ಇದಕ್ಕೆ ಅಗತ್ಯವಾದ ಕೆಲಸ ಸಮ್ಮಿಶ್ರ ಸರ್ಕಾರ ಮಾಡುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸುತ್ತೇವೆ. ಜವಾಬ್ದಾರಿಯನ್ನ ಹೆಚ್ಚು ನಿರ್ವಹಣೆ ಮಾಡಲು ಜನ ಅವಕಾಶ ನೀಡುವ ಸಂದೇಶ ನೀಡಿದ್ದಾರೆ. ನಮ್ಮ ನಡವಳಿಕೆಯನ್ನ ಮತ್ತಷ್ಟು ಉತ್ತಮ ಮಾಡಿಕೊಂಡು ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv