– ಸೋಮನಗೌಡ ಪಾಟೀಲ್ ಬಿಜೆಪಿ ಬಿಡಲ್ಲ
ವಿಜಯಪುರ: ಮನಸ್ಸು ಮಾಡಿದರೆ ಗೃಹ ಸಚಿವ ಎಂ.ಬಿ. ಪಾಟೀಲ್ ಅವರನ್ನು ಬಿಜೆಪಿಗೆ ತರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ಎಂ.ಬಿ.ಪಾಟೀಲ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡಿದ್ದಿವೋ ಬಿಟ್ಟಿದ್ದಿವೋ ಅದು ನಮಗೆ ಗೊತ್ತು. ಅದನ್ನು ಮಾಧ್ಯಮದ ಮುಂದೆ ಯಾಕೆ ಹೇಳಬೇಕು. ಅದು ನಮ್ಮ ವೈಯಕ್ತಿಕ ವಿಚಾರ ಎಂದು ನಗೆ ಬೀರಿದರು.
ಇತ್ತೀಚೆಗೆ ಬಿಡುಗಡೆಯಾದ ಆಡಿಯೋದಲ್ಲಿ ಸೋಮನಗೌಡ ಪಾಟೀಲ್ ಅವರು ಮಾತನಾಡಿಲ್ಲ. ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ್ ಒಳ್ಳೆಯ ಮನೆತನದಿಂದ ಬಂದವರು. ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ. ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಸಹಜವಾಗಿಯೇ ಮಾತನಾಡಿದ್ದಾರೆ. ಅದರಲ್ಲೇನು ಗಂಭೀರವಾದ ವಿಷಯವಿಲ್ಲ. ಕಾರ್ಯಕರ್ತರ ಜೊತೆಗೆ ಸಾಮಾನ್ಯವಾಗಿ ಹೀಗೆ ಮಾತನಾಡುತ್ತೇವೆ ಎನ್ನುವ ಮೂಲಕ ತಮ್ಮ ಹಾಗೂ ಜೆಡಿಎಸ್ ಶಾಸಕರ ಪರ ಬ್ಯಾಟ್ ಬೀಸಿದರು.
ನನ್ನ ಹಾಗೂ ಗೃಹಸಚಿವ ಎಂ.ಬಿ.ಪಾಟೀಲ್ ನಡುವಿನ ಸಂಬಂಧ ಚೆನ್ನಾಗಿದೆ. ಅದರ ಅರ್ಥ ಅವರು ಬಿಜೆಪಿ ಬರುತ್ತಾರೆ ಅಥವಾ ನಾನು ಕಾಂಗ್ರೆಸ್ ಸೇರುತ್ತೇನೆ ಅಂತ ಅಲ್ಲ. ಅಭಿವೃದ್ಧಿ ವಿಷಯದಲ್ಲಿ ನಮ್ಮ ಅವರ ಸಂಬಂಧ ಚೆನ್ನಾಗಿದೆ ಅಷ್ಟೇ ಎಂದು ಹೇಳಿದರು.