ಶಿವಮೊಗ್ಗ: ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿ ನಾವು ಗೆಲ್ಲಿಸಿದರೆ, ಅವರು ನಮಗೆ ಟೋಪಿ ಹಾಕಿ ಹೋಗುತ್ತಾರೆ ಎನ್ನುವ ಮೂಲಕ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮರಸ್ವಾಮಿ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ರಾಮನಗರದಲ್ಲಿ ರಾಜು ಎಂಬವರನ್ನು ಸಿಎಂ ಕುಮಾರಸ್ವಾಮಿ ನಿಲ್ಲಿಸಿ ಗೆಲ್ಲಿಸಿದ್ದರು. ಆದರೆ ಆ ಪಾರ್ಟಿ ಕೊನೆಗೆ ನಮಗೆ ಟೋಪಿ ಹಾಕಿ ಹೋದರು. ನಮ್ಮ ಕುಟುಂಬ ಬಿಟ್ಟು ಪಕ್ಷದ ಬೇರೆ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿ ಸ್ವತಃ ನಾವೇ ಟೋಪಿ ಹಾಕಿಸಿಕೊಂಡಿದ್ದೇವೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾರವರನ್ನು ರಾಮನಗರ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಿದ್ದಾರೆ. ಈಗಲೂ ಬೇರೆಯವರನ್ನು ನಿಲ್ಲಿಸಿ ಟೋಪಿ ಹಾಕಿಸ್ಕೋಬೇಕಾ ನೀವೇ ಹೇಳಿ ಎಂದು ಪ್ರಶ್ನಿಸಿದರು.
ಇದೇ ವೇಳೆ ಭವಾನಿ ರೇವಣ್ಣರ ಬಗ್ಗೆ ಪ್ರಶ್ನಿಸಿದಾಗ, ಏನ್ರೀ ಭವಾನಿ ರೇವಣ್ಣ ಬಗ್ಗೆ ಕೇಳ್ತೀರಿ? ಭವಾನಿ ಈಗ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ. ಅವರನ್ನು ಎಂಎಲ್‍ಎ ಮಾಡಬೇಕು ಅಂದಿದ್ರೆ, ಯಾವತ್ತೋ ಚುನಾವಣೆಗೆ ನಿಲ್ಲಿಸುತ್ತಿದ್ದೆ. ಈ ಹಿಂದೆ ಬೇಲೂರು ಕ್ಷೇತ್ರದ ಕಾರ್ಯಕರ್ತರು ಸಹ ಒತ್ತಡ ಹಾಕಿದ್ದರು. ಅಲ್ಲದೇ ನಮ್ಮ ಕುಟುಂಬ ಹೊಡೆದಾಡುತ್ತಿದ್ದಾರೆ ಅಂತ ಯಾರಾದರು ಅಂದುಕೊಂಡಿದ್ದರೆ, ಅದು ಅವರ ಕನಸು ಅಷ್ಟೇ. ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯ 17 ಮಂದಿ ಸಂಸದರು, ರಾಜ್ಯಕ್ಕೆ ಏನು ಮಾಡಿದ್ದಾರೆ? ಬರೀ ಅಪ್ಪ, ಮಕ್ಕಳು ಅಂತಾ ನಮ್ಮ ಬಗ್ಗೆಯೇ ಯಾವಾಗಲೂ ಮಾತನಾಡುತ್ತಾರೆ. ನಮ್ಮ ಬಗ್ಗೆ ಮಾತನಾಡದೇ ಇದ್ದರೆ ಅವರಿಗೆ ಊಟ ಸೇರಲ್ಲ. ಹೀಗಾದರೂ ನಮ್ಮನ್ನ ದಿನ ನೆನೆಯುತ್ತಾರಲ್ಲ, ಅವರಿಗೆ ನನ್ನ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಜನ ನಮ್ಮನ್ನು ಮರೆಯದಂತೆ ಅವರೇ ನಮ್ಮ ಹೆಸರು ಹೇಳಿ ನೆನಪಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv