ಬೆಂಗಳೂರು: ಲಿಂಗಾಯತರು ವೀರಶೈವ ಮಹಾಸಭಾದಲ್ಲಿ ಸೇರಲ್ಲ. ಅವರೇ ಬಂದು ನಮ್ಮ ಜೊತೆ ಸೇರಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಮ್ದಾರ್ ಹೇಳಿದ್ದಾರೆ.
ನಮ್ಮ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ನಿಲುವುಗಳನ್ನು ವೀರಶೈವ ಮಹಾಸಭಾದವರು ಒಪ್ಪಿದ್ದಾರೆ. ಲಿಂಗಾಯತ ಮಹಾಸಭೆ ಅಥವಾ ಲಿಂಗಾಯತ ವೀರಶೈವ ಮಹಾಸಭೆಯನ್ನು ಒಪ್ಪಿಕೊಂಡು ವೀರಶೈವ ಮಹಾಸಭಾದವರು ಬರುವುದಾದಲ್ಲಿ ಸಂತೋಷದಿಂದ ಸ್ವಾಗತ ಮಾಡುತ್ತೇವೆ. ತಾತ್ವಿಕವಾಗಿ ಸೈದ್ಧಾಂತಿಕವಾಗಿ ಒಂದಾಗುವುದಾದಲ್ಲಿ ಒಪ್ಪುತ್ತೇವೆ, ರಾಜಕೀಯ ಆಮೇಲಿನದು. ಇಲ್ಲಿಯವರೆಗೆ ಯಾವುದೇ ಸಭೆಗಳು ಆಗಿಲ್ಲ. ಅವರು ಮಾತಾಡುವುದಾದರೆ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
Advertisement
ಧರ್ಮದ ಬಗ್ಗೆ ಅಪಪ್ರಚಾರ ಮಾಡಿದ್ದೇ ಶಾಮನೂರು ಶಿವಶಂಕರಪ್ಪ. ಪಂಚಪೀಠಗಳನ್ನ ಮುಂದೆ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಉತ್ತರಿಸಬೇಕಿದೆ. ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪರನ್ನು ಪಕ್ಷದಿಂದ ಹೊರ ಹಾಕಬೇಕಿದ್ದು, ಚುನಾವಣೆಯಲ್ಲಿ ಅವರ ಮಗನನ್ನು ಸೋಲಿಸುವ ಮೂಲಕ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
Advertisement
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಒಪ್ಪಿಲ್ಲ ಎಂದು ಖಚಿತವಾದ ಅಧಿಕೃತ ಹೇಳಿಕೆ ಬಂದಿಲ್ಲ. ನಮ್ಮ ಹೋರಾಟ ರಾಜಕೀಯ ಉದ್ದೇಶವನ್ನ ಹೊಂದಿಲ್ಲ. ಈ ಹೋರಾಟಕ್ಕೆ ವೀರಶೈವ ಮಹಾಸಭಾ ಕಾರಣ. ವೀರಶೈವ ಮಹಾಸಭಾ ತಮ್ಮ ನಿಲುವನ್ನ ಬದಲಿಸಿದರೆ ನಾವು ಒಂದಾಗಲೂ ಸಿದ್ಧ ಇಲ್ಲ ಅಂದಲ್ಲಿ ಒಂದಾಗಲ್ಲ. ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಹೋರಾಟ ನಿಂತಿಲ್ಲ ಮುಂದುವರೆದಿದೆ. ಮೊದಲಿಗೆ ಸಾಮಾಜಿಕ ಧಾರ್ಮಿಕ ಹೋರಾಟ ಮಾಡುತ್ತೇವೆ ಆನಂತರ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.