ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಕಾನೂನು ಪ್ರಕಾರ ಗಲ್ಲಿಗೆ ಹಾಕಲಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಹೇಳಿದ್ದಾರೆ.
ಬಿಟ್ ಕಾಯಿನ್ (Bit Coin) ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಳಿ ಸಾಕ್ಷಿ ಇದ್ದರೆ ನೀಡಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಟ್ ಕಾಯಿನ್ ವಿಚಾರವಾಗಿ ಪೊಲೀಸ್ ದಾಖಲೆ ಮಾಡಿರುವ ಎಫ್ಐಆರ್, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನ ಮಂತ್ರಿಗಳಿಗೆ ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗ ಮಾಡಲಿ. ಕಾಂಗ್ರೆಸ್ ಪಕ್ಷದ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದರು. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಯ ದೃಷ್ಟಿ ತೆಗೆದ ಮಂಜಮ್ಮ ಜೋಗತಿ!
ಹಿಂದೆ ಸಂದೀಪ್ ಪಾಟೀಲ್ ಅವರು ಮಾಧ್ಯಮಗೋಷ್ಠಿ ನಡೆಸಿದ್ದು, ಇಡಿಗೆ ಪ್ರಕರಣ ವಹಿಸಿರುವ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ. ಇದೆಲ್ಲದರ ಮಾಹಿತಿಯನ್ನು ನೀಡಲಿ. ನಾವು ಕೂಡ ಈ ವಿಚಾರವಾಗಿ ಆಂತರಿಕ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ನಾವು ಕೂಡಾ ಸೂಕ್ತ ಸಮಯದಲ್ಲಿ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ. ನಾವು ತನಿಖೆ ಮಾಡಿಸುವುದು ಬೇರೆ ವಿಚಾರ. ಬಿಜೆಪಿ ಅಧಿಕಾರದಲ್ಲಿದೆ. ಅವರ ಕೈಯಲ್ಲಿ ಸರ್ಕಾರ ಇದೆ. ಗೃಹಮಂತ್ರಿಗಳು ಇದ್ದಾರೆ. ರಾಜ್ಯದ ಜನರಿಂದ ಅವರು ಮುಚ್ಚಿಟ್ಟಿರುವ ಸತ್ಯಾಂಶ ಹೊರಗಿಡಲಿ ಎಂದರು.
ವಿದ್ವತ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಜತೆ ನಲಪಾಡ್ ಆರೋಪಿಯಾಗಿದ್ದರೂ ಅವರ ವಿರುದ್ಧ ಯಾಕೆ ವಿಚಾರಣೆ ಮಾಡಲಿಲ್ಲ ಎಂಬ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ನಾನು ಗೃಹಮಂತ್ರಿಗಳಿಂದ ಹೇಳಿಕೆ ಬಯಸುತ್ತೇನೆ. ಮಾಧ್ಯಮಗಳ ಮೂಲಕ ನಾನು ಯಾರ ಹೆಸರನ್ನೂ ಕೇಳಲು ಬಯಸುವುದಿಲ್ಲ. ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇದ್ದರೆ ಅವರು ಹೇಳಲಿ. ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರರನ್ನು ಹಾಡಿ ಹೊಗಳಿಕೊಂಡ ಸಿದ್ದು-ಜಿಟಿಡಿ
ಜಾಮೀನು ಪಡೆದಿದ್ದ ಶ್ರೀಕಿ ಅವರನ್ನು ಮತ್ತೆ ಬಂಧಿಸಿರುವುದರ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬ ಪ್ರಶ್ನೆಗೆ, ಈ ಪ್ರಕರಣದಲ್ಲಿ ಎಷ್ಟು ಎಫ್ಐಆರ್ ಬಂದಿದೆ. ಯಾರ ಮೇಲೆ ಪ್ರಕರಣ ದಾಖಲಾಗಿದೆ, ಹೈಕೋರ್ಟ್‌ನಲ್ಲಿದ್ದ ಪ್ರಕರಣ ಹಿಂಪಡೆದಿದ್ದು ಯಾಕೆ ಎಂಬ ವಿಚಾರಗಳನ್ನು ಬಹಿರಂಗ ಪಡಿಸಲಿ. ಸಮಯ ಬಂದಾಗ ಪಕ್ಷ ಚರ್ಚೆ ಮಾಡಿ ತನ್ನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರ ಈ ಪ್ರಕರಣದಲ್ಲಿ ಪಂಚನಾಮೆಯಿಂದ ಹಿಡಿದು ಜಾರಿ ನಿರ್ದೇಶನಾಲಯ (ED)ಕ್ಕೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಲಿ ಎಂದು ಉತ್ತರಿಸಿದರು.