ಗದಗ: ಬೆಂಬಲ ಬೆಲೆ ನೀಡದೇ ಇದ್ದರೆ ರೈತರು (Farmers) ಶಾಸಕರ ಮತ್ತು ಜಿಲ್ಲಾಧಿಕಾರಿಗಳ ಮನೆ ಮುಂದೆ ಮೆಕ್ಕೆಜೋಳ (Maize) ಸುರಿದು ಪ್ರತಿಭಟನೆ (Protest) ನಡೆಸಿ ಎಂದು ದಿಂಗಾಲೇಶ್ವರ ಶ್ರೀ (Dingaleshwar Shree) ಕರೆ ನೀಡಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳೆದ 5 ದಿನಗಳಿಂದ ಮೆಕ್ಕೆಜೋಳ ಬೆಂಬಲ ಬೆಲೆ, ಬೆಳೆ ಪರಿಹಾರ, ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಈಗ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ಭಾಗದ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ರೈತಪರ ಸಂಘಟನೆಗಳು ಸಾಥ್ ನೀಡಿವೆ. ಇಂದು ದಿಂಗಾಲೇಶ್ವರ ಶ್ರೀಗಳು ರೈತರ ಹೋರಾಟ ವೇದಿಕೆಗೆ ಭೇಟಿ ನೀಡಿ, ರೈತರನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಬುರುಡೆ ಗ್ಯಾಂಗ್ ವಿರುದ್ಧವೇ ಚಾರ್ಜ್‌ಶೀಟ್ – ಗುರುವಾರ ಕೋರ್ಟ್‌ಗೆ ಸಲ್ಲಿಕೆ ಸಾಧ್ಯತೆ
ತಮ್ಮ ಭಾಷಣದಲ್ಲಿ ಶ್ರೀಗಳು, ರೈತಪರ ಸರ್ಕಾರ ಇಲ್ಲಿಯವರೆಗೆ ಬಂದಿಲ್ಲ. ಕ್ಯಾಬಿನೆಟ್ ನಲ್ಲಿ ಬೆಂಬಲ ಬೆಲೆ, ಖರೀದಿ ಕೇಂದ್ರದ ಬಗ್ಗೆ ಘೋಷಣೆ ಮಾಡಿದರೆ ಒಳಿತು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೆಕ್ಕೆಜೋಳ ಬೆಳೆದ ಎಲ್ಲಾ ರೈತರು ಒಟ್ಟಾಗಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಮನೆಯ ಮುಂದೆ ಸುರಿದರೆ ಅವರ ಮನೆಯೇ ಮುಚ್ಚಿಹೋಗತ್ತದೆ ಎಂದರು.
ಶ್ರೀಗಳು, ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ಕಬ್ಬು ಬೆಳೆಗಾರರಿಗೆ ನೀಡಿದ ಮನ್ನಣೆಯಂತೆ ಬೆಂಬಲ ಬೆಲೆ ಪ್ರಕಟಿಸಬೇಕು. ಚುನಾವಣೆ ವೇಳೆ ರೈತರ ಪರ ಹೇಳಿಕೆ ಕೊಡುತ್ತಾರೆ. ಅವರ ಹೇಳಿಕೆಗೆ ನೀವೆಲ್ಲಾ ಮರಳಾಗುತ್ತೀರಿ. ಅವರು ಚುನಾಯಿತರಾದ ಮೇಲೆ ಅವರು ವಿಧಾನ ಸೌಧದಲ್ಲಿ ಕೂರುತ್ತಾರೆ. ನೀವು ಹೋರಾಟದ ವೇದಿಕೆಯಲ್ಲಿ ಕೂರುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದರು.


