ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿರುವ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ತಡೆಯಲು ಅವಕಾಶ ಇದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆಯ ಸಾರ್ವತ್ರೀಕ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇರುವ ವೇಳೆ ಉಪ ಚುನಾವಣೆ ಘೋಷಣೆ ಆಗಿದೆ. ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಅಡಿ ಚುನಾವಣೆ ತಡೆಯಬಹುದುದಾಗಿದೆ. 151 ಎ ಪ್ರಕಾರ ಉಳಿದ ಲೋಕಸಭೆಯ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಚುನಾವಣೆ ನಡೆಸುವ ಅವಶ್ಯಕತೆಯಿಲ್ಲ. ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಆಯೋಗಕ್ಕೆ ಮನವಿ ಸಲ್ಲಿಸಬೇಕಿದೆ. ಆಗ ಚುನಾವಣೆ ಆಯೋಗ ತನ್ನ ಕ್ರಮವನ್ನು ಮತ್ತೆ ವಿಮರ್ಶೆಗೆ ಒಳಪಡಿಸಬಹುದು ಎಂದು ವಿವರಿಸಿದರು.
Advertisement
Advertisement
ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅವರು, ಚುನಾವಣೆ ಮಾಡಬಾರದು ಎಂದು ನಿಯಮವಿಲ್ಲ. ಸದ್ಯ ಉಪ ಚುನಾವಣೆ ಘೋಷಣೆ ಮಾಡಿರುವುದರಲ್ಲಿ ಚುನಾವಣಾ ಆಯೋಗದ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ ಯಾವುದೇ ಕಾರಣದಿಂದ ತೆರವಾದ ಸ್ಥಾನಗಳಿಗೆ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಕಾನೂನಿದೆ. ಅದ್ದರಿಂದ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ತನ್ನ ಕೆಲಸ ಮಾಡಿದೆ. 151 ಎ ಸೆಕ್ಷನ್ ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆಗಳಿಗೂ ಅನ್ವಯಿಸುತ್ತದೆ ಎಂದರು.
Advertisement
ಎರಡು ಸಂದರ್ಭದಲ್ಲಿ ಉಪಚುನಾವಣೆ ಆಗಲ್ಲ:
ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಪ್ರಕಾರ ಎರಡು ಸಂದರ್ಭದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ. ಮೊದಲನೆಯದಾಗಿ, ತೆರವಾದ ನಿರ್ದಿಷ್ಟ ಲೋಕಸಭೆ ಕ್ಷೇತ್ರದ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪ ಚುನಾವಣೆ ನಡೆಸಲು ಅವಕಾಶ ಇಲ್ಲ. ಎರಡನೆಯದಾಗಿ, ಚುನಾವಣೆ ಆಯೋಗ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಉಳಿಕೆ ಅವಧಿಯಲ್ಲಿ ಉಪ ಚುನಾವಣೆ ನಡೆಸುವುದು ಕಷ್ಟ ಎಂದು ಹೇಳಿದರೆ ಚುನಾವಣೆ ನಡೆಯುವುದಿಲ್ಲ.
Advertisement
2013ರಲ್ಲಿ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗುವುದು ಚುನಾವಣೆ ಆಯೋಗ ಸ್ಪಷ್ಟ ಪಡಿಸಿತ್ತು. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3 ರಂದು ನಡೆದರೆ ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಅಂದರೆ ಈ ಫಲಿತಾಂಶ ಬಂದ ಬಳಿಕ ಗೆದ್ದವರಿಗೆ ಸಿಗುವುದು ಕೇವಲ 4 ತಿಂಗಳು ಮಾತ್ರ. ಸದಸ್ಯರು ರಾಜೀನಾಮೆ ನೀಡಿದ 6 ತಿಂಗಳ ಒಳಗಡೆ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಆದರೆ 3-4 ತಿಂಗಳ ಅವಧಿಗಾಗಿ ಹಣವನ್ನು ಖರ್ಚು ಮಾಡಿ ಈ ಚುನಾವಣೆ ನಡೆಸಬೇಕೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಲೋಕಸಭಾ ಉಪಚುನಾವಣೆ ನಡೆಸಬೇಕೇ? ಬೇಡವೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಈ ರೀತಿಯ ಪರಿಸ್ಥಿತಿ ಬಂದಾಗ ಏನು ಮಾಡಬಹುದು ನಿಮ್ಮ ಸಲಹೆಯನ್ನು ತಿಳಿಸಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv