– ಶಿವರಾಮೇ ಗೌಡ ಬಗ್ಗೆ ವಕೀಲ ಹೇಳಿದ್ದೇನು..?
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವೀಡಿಯೊಗಳ ವೈರಲ್ ಹಿಂದೆ ಡಿಕೆಶಿಯದ್ದು ಪಾತ್ರ ಇಲ್ಲ ಅನ್ನೋದಾದ್ರೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಹಿರಂಗ ಚರ್ಚೆಗೆ ಬರಲಿ, ಅಲ್ಲೇ ಆಡಿಯೋ ಬಿಡುಗಡೆ ಮಾಡೋಣ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇ ಗೌಡ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪೂರ್ತಿ ಆಡಿಯೋ ಹೊರಗೆ ಬಿಟ್ರೆ ಹಳ್ಳಿ ಜನ ಕಾಲಲ್ಲಿರೋದನ್ನ ಕೈಗೆ ತಗೊತಾರೆ. ಹೀಗಾಗಿ ಸದ್ಯಕ್ಕೆ ಆಡಿಯೋ ಬಿಡುಗಡೆ ಮಾಡುವುದು ಬೇಡ. ಅದನ್ನು ಸಮಗ್ರ ತನಿಖೆಗೆ ಕೊಟ್ಟು ಆಮೇಲೆ ಬೇಕಿದ್ರೆ ಕೋರ್ಟ್ ಅಥವಾ ತನಿಖಾಧಿಕಾರಿಗಳು ಬಿಡುಗಡೆ ಮಾಡಲಿ. ಈಗ ಬಿಡುಗಡೆ ಮಾಡಿದ್ರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೂರ್ತಿ ಆಡಿಯೋ ಬಿಡುಗಡೆ ಮಾಡಿಲ್ಲ ಎಂದರು.
ಕಾಂಗ್ರೆಸ್ ನಾಯಕರು ಮಾತನಾಡಿ ಅವರ ಕೊಳಕು ಮನಸ್ಥಿತಿಯನ್ನ ತೋರಿಸ್ತಿದ್ದಾರೆ. ಇವತ್ತು ನನ್ನ ಮೇಲೆ ಕಾಂಗ್ರೆಸ್ ನಾಯಕರು ಮುಗಿಬಿದ್ರೆ ಸತ್ಯ ಮರೆ ಮಾಚಲ್ಲ. ಡಿಸಿಎಂ ವಿರುದ್ಧ ಪೋಸ್ಟರ್ ಅಂಟಿಸಿರೋದು ಸರಿ ಇದೆ. ಚುನಾವಣೆ ಮುಗಿದ ಬಳಿಕ ನಮ್ಮದೇ ಹೋರಾಟ ಆರಂಭವಾಗುತ್ತೆ ಶೀಘ್ರದಲ್ಲೇ ಸರ್ಕಾರ ಪತನವಾಗುತ್ತೆ ಅಂತಾ ವಕೀಲ ದೇವರಾಜೇಗೌಡ ಗುಡುಗಿದ್ದಾರೆ.
ಇದೇ ವೇಳೆ ಎಲ್.ಆರ್ ಶಿವರಾಮೇ ಗೌಡ (L R Shivarame Gowda) ಆರೋಪದ ಕುರಿತು ಪರತಿಕ್ರಿಯಿಸಿ, ವಯಸ್ಸಿನಲ್ಲಿ ದೊಡ್ಡವರಾಗಿರುವ ಅವರ ಮಾತಿನಲ್ಲಿ ಮಿತಿ ಇರಲಿ. ನನ್ನ ಒಟ್ಟು ಆಸ್ತಿಯ ಬಗ್ಗೆ ಶಿವರಾಮೇಗೌಡರು ಅಫಿಡವಿಟ್ ತೆಗೆದು ನೋಡಲಿ. ನಾನು ಭಿಕ್ಷುಕ ಅಲ್ಲ. ನಿಮ್ಮಂತೆ ಎಲ್ಲಿ ಬೇಕೋ ಅಲ್ಲಿ ಬ್ರೋಕರ್ ಕೆಲಸ ಮಾಡುತ್ತಾ ಜೀವನ ಮಾಡುತ್ತಿಲ್ಲ. ಅದರ ಅವಶ್ಯಕತೆನೂ ನನಗಿಲ್ಲ ಎಂದು ಕಿಡಿಕಾರಿದರು.
ವೃತ್ತಿಯಲ್ಲಿ ವಕೀಲನಾಗಿದ್ದು, ಯುಕ್ತಿಯಲ್ಲಿಯೂ ನಿಮ್ಮನ್ನು ಸಾವಿರ ಪಟ್ಟು ಮೀರಿಸುವಂತಹ ಶಕ್ತಿ ನನಗೆ ಭಗವಂತ ಕೊಟ್ಟಿದ್ದಾನೆ. ಆ ಯುಕ್ತಿಯನ್ನು ನಾನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುತ್ತೇನೆ. ಬಕೆಟ್ ಹಿಡಿಯೋ ಕೆಲಸಕ್ಕೆ ಬಳಸಲ್ಲ. ಹೀಗಾಗಿ ನಿಮ್ಮ ನೈತಿಕತೆ ಹಾಗೂ ಗುಣ ಅಲ್ಲಿಯ ಜನಕ್ಕೆ ಗೊತ್ತಾಗಿದೆ. ನೀವು ಬಿಜೆಪಿ ಪಕ್ಷದ ಸದಸ್ಯನಾಗಿದ್ದುಕೊಂಡು ಕಾಂಗ್ರೆಸ್ ಜೊತೆ ಕೈ ಜೊಡಿಸುತ್ತಿದ್ದೀರಿ. ಬ್ಲ್ಯಾಕ್‍ಮೇಲ್ ಶಿವರಾಮೇಗೌಡ ಎಂಬುದು ನಿಮಗೆ ಅನ್ವಯಿಸುತ್ತದೆ ಎಂದು ವಾಗ್ದಾಳಿ ನಡೆಸಿ ಮಾಜಿ ಸಂಸದರಿಗೆ ಎಚ್ಚರಿಕೆ ಕೊಟ್ಟರು.