ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯವನ್ನು ಟೀಂ ಇಂಡಿಯಾ ಭಾನುವಾರ ಗೆದ್ದರೆ ಭಾರತ ಮತ್ತೊಂದು ದಾಖಲೆಗೆ ಪಾತ್ರವಾಗಲಿದೆ. ನಾಳೆಯ ಪಂದ್ಯ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇಲ್ಲಿ ಇದುವರೆಗೆ ಆಡಿದ 4 ಪಂದ್ಯವನ್ನೂ ಭಾರತವೇ ಗೆದ್ದಿದೆ. ಆಸೀಸ್ ವಿರುದ್ಧದ ಪಂದ್ಯವನ್ನೂ ಗೆದ್ದರೆ ಭಾರತ ಈ ಕ್ರೀಡಾಂಗಣದಲ್ಲಿ 5ನೇ ಪಂದ್ಯವನ್ನು ಗೆದ್ದಂತಾಗುತ್ತದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಲಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.
Advertisement
ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿದೆ. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗುತ್ತದೆ. ಇದು ಕೂಡಾ ಭಾರತದ ಪಾಲಿಗೆ ದಾಖಲೆ ಎನಿಸಲಿದೆ.
Advertisement
ರನ್ ಮೆಷಿನ್: ಇಂದೋರ್ ಕ್ರೀಡಾಂಗಣ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಇಲ್ಲಿ ರನ್ ಮಳೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಕೆಲ ದಿನಗಳಿಂದ ಇಲ್ಲಿ ಮಳೆಯಾಗುತ್ತಿದ್ದು ಭಾನುವಾರವೂ ಮಳೆ ಬಂದರೆ ರನ್ ಮಳೆಯಾಗಲ್ಲ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.
Advertisement
ಟೀಂ ಇಂಡಿಯಾ ಕಳೆದ ಎರಡೂ ಪಂದ್ಯಗಳಲ್ಲಿ ಆಸೀಸ್ ವಿರುದ್ಧ ಉತ್ತಮ ಆಟವಾಡುತ್ತಿದೆ. 5 ಏಕದಿನ ಪಂದ್ಯಗಳಲ್ಲಿ ಭಾರತ 2-0 ಮುನ್ನಡೆಯಲ್ಲಿದೆ. ಭಾನುವಾರದ ಪಂದ್ಯವನ್ನೂ ಗೆದ್ದರೆ ಟೀಂ ಇಂಡಿಯಾ ಸರಣಿ ಕೈವಶ ಪಡಿಸಿಕೊಳ್ಳಲಿದೆ.