ಧಾರವಾಡ: ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಹಿತಿಗಳು ಮತ್ತು ಹೋರಾಟಗಾರರು ಧರಣಿ ನಡೆಸಿ ಆಕ್ರೋಶ ಹೋರಹಾಕಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು, ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಹರಿಹಾಯ್ದರು.
ಕನ್ನಡ ಬೇಕು ಎನ್ನುವವರಿಗೆ ಮಾತ್ರ ಇಲ್ಲಿ ಸ್ಥಳ ಇದೆ. ಕನ್ನಡ ಬೇಡ ಎನ್ನುವವರಿಗೆ ಇಲ್ಲಿ ಸ್ಥಳ ಇಲ್ಲ. ಕನ್ನಡ ಯಾರಿಗೆ ಬೇಕಾಗಿದೆ ಅವರು ಕರ್ನಾಟಕದಲ್ಲಿ ಇರುತ್ತಾರೆ. ಯಾರಿಗೆ ಬೇಡವಾಗಿದೆಯೋ ಅವರು ಕರ್ನಾಟಕ ಬಿಟ್ಟು ಇಂಗ್ಲೆಂಡಿಗೆ ಹೋಗಲಿ. ಇನ್ನು ಕನ್ನಡ ತಾಯಿ ಬಗ್ಗೆ ನಾವು ಘೋಷಣೆ ಕೂಗುತ್ತೇವೆ. ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ನಾವು ಸಹಿಸುವುದಿಲ್ಲ ಸರ್ಕಾರದ ಇಂಗ್ಲೀಷ್ ಮಾಧ್ಯಮ ನೀತಿ ವಿರೋಧ ಮಾಡುತ್ತೇವೆ ಎಂದು ಕಿಡಿಕಾರಿದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಮಾತನಾಡಿ, ಇವರಿಗೆ ಜನರ ಬಗ್ಗೆ ನಿಷ್ಠೆ ಇದ್ದರೆ ಈಗ ನಡೆದಿರುವುದನ್ನು ಬಿಟ್ಟು ಬಿಡಬೇಕು. ಕನ್ನಡ ಹಾಗೂ ಕರ್ನಾಟಕಕ್ಕಾಗಿ ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಜನರ ಬಗ್ಗೆ ಕನಿಕರ ಇಲ್ಲ ಅನಿಸುತ್ತದೆ ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.