ಬೆಂಗಳೂರು: ಸಮನವ್ಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದರೆ ಕೆಲ ಶಾಸಕರು ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಈ ಮೂಲಕ ಸಿದ್ದರಾಮಯ್ಯ ಅವರಿಗೆ ಮತ್ತೆ ಸಿಎಂ ಕನಸು ಚಿಗುರಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಎಲ್ಲರನ್ನು ನಿಭಾಯಿಸಿದ್ದರು. ಇದೀಗ ರಾಜೀನಾಮೆ ನೀಡಿರುವ ಬಹುತೇಕ ಶಾಸಕರು ಸಿದ್ದರಾಮಯ್ಯರ ಬೆಂಬಲಿಗರಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ರೆ ರಾಜೀನಾಮೆ ಕೊಟ್ಟ ಕೆಲವು ಶಾಸಕರು ವಾಪಸ್ ಬರುತ್ತಾರೆ ಅನ್ನೋ ನಂಬಿಕೆ ಇದೀಗ ಕಾಂಗ್ರೆಸ್ ವಲಯದಲ್ಲಿದೆ.
ಇತ್ತ ಹೇಗಾದ್ರೂ ಮಾಡಿ ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗೋದಕ್ಕೆ ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಮನ್ವಯ ಸಮಿತಿಗೆ ಸಿಎಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ರೆ ಸರ್ಕಾರ ಉಳಿಯುತ್ತದೆ ಎಂದು ಬಹುತೇಕ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ರೊಡನೆ ಚರ್ಚೆ ಮಾಡುತ್ತಿದ್ದು, ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಅಸ್ತ್ರವಾಗಿ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗ್ತಾರಾ ಅಥವಾ ಈಗಿರುವ ಸಿಎಂ ಅವರೇ ಅಧಿಕಾರ ಮುಂದುವರಿಸುತ್ತಾರಾ ಎಂಬುದಕ್ಕೆ ಸೋಮವಾರ ಉತ್ತರ ಸಿಗಲಿದೆ.
ಮಾಜಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಿನ ಮುಖ್ಯಮಂತ್ರಿಯಾಗ್ತಾರಾ ಅನ್ನೋ ಪ್ರಶ್ನೆಗೆ ನಗರದಲ್ಲಿ ಸುದ್ದಿಗಾರರಿಗೆ ಉತ್ತರಿಸಿದ ಸಿದ್ದರಾಮಯ್ಯ, ಖರ್ಗೆ ಮುಖ್ಯಮಂತ್ರಿ ಆಗಲು ಸಿಎಂ ಕುರ್ಚಿ ಖಾಲಿ ಎಲ್ಲಿದೆ? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಯಾರು ಹೇಳಿದ್ದಾರೆ. ಯಾರಾದರೂ ನಿಮಗೆ ಹೇಳಿದ್ದಾರಾ ಎಂದು ಪ್ರಶ್ನಿಸಿದ ಮಾಜಿ ಸಿಎಂ, ರಾಮಲಿಂಗಾ ರೆಡ್ಡಿ ಅವರಿಗೆ ಎರಡನೇ ಬಾರಿ ಮಂತ್ರಿ ಮಾಡುತ್ತಿದ್ದೆವು. ಫೋನ್ ಅಲ್ಲಿ ಸಿಎಂ ಜೊತೆ ಮಾತನಾಡಿದ್ದೀನಿ. ಇಂದು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ ಎಂದರು.
ಶಾಸಕರನ್ನ ಸಂಪರ್ಕ ಮಾಡುವ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಐದಾರು ಜನರ ಜೊತೆ ಸಂಪರ್ಕದಲ್ಲಿದ್ದೇನೆ. ಅವರ ಜೊತೆ ಈಗಾಗಲೇ ಮಾತಾಡಿದ್ದೇನೆ. ಬಿಜೆಪಿಯಲ್ಲಿ ಇರುವವರೆಲ್ಲ ನನ್ನ ಸ್ನೇಹಿತರೇ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಇರುವವರೆಲ್ಲಾ ನನ್ನ ಆಪ್ತ ಸ್ನೇಹಿತರು ಎಂದಿದ್ದಾರೆ.
ಜನರ ತೀರ್ಪು ಧಿಕ್ಕರಿಸಿದ್ರೆ ಜನರೇ ಪಾಠ ಕಲಿಸ್ತಾರೆ. ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲರೂ ಆಪ್ತರೇ, ಜೆಡಿಎಸ್ ಅವರ ಬಿಟ್ಟು ಎಲ್ಲರೂ ನಮ್ಮ ಜೊತೆ ಇದ್ದರು ಎಂದರು.