ರಾಮನಗರ: ಕಾರ್ಯಕರ್ತರ ಸಭೆಯಲ್ಲಿ ಚನ್ನಪಟ್ಟಣದಲ್ಲೇ ಇರುತ್ತೇನೆ ಎಂದು ಹೇಳಿದ್ದ ಮಾಜಿ ಶಾಸಕ ಸಿಪಿ ಯೋಗೇಶ್ವರ್ ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಉಪ ಚುನಾವಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ದಿನಾಂಕ ನಿಗದಿಯಾಗಿಲ್ಲ. ನಮ್ಮ ಪಕ್ಷ ಈ ಬಗ್ಗೆ ಕರೆದು ಮಾತನಾಡಿಲ್ಲ. ಪಕ್ಷದ ತೀರ್ಮಾನವೇ ನನ್ನ ತೀರ್ಮಾನ ಎಂದು ಹೇಳಿದ್ದಾರೆ.
Advertisement
ಎಚ್‍ಡಿ ಕುಮಾರಸ್ವಾಮಿಯವರ ಕುಟುಂಬದ ಎದುರು ಮೂರು ಚುನಾವಣೆ ಮಾಡಿದ್ದೇನೆ. ಅನಿತಾ ಕುಮಾರಸ್ವಾಮಿ ಯವರನ್ನ ಸೋಲಿಸಿದ್ದೇನೆ. ಎಚ್‍ಡಿಕೆ ವಿರುದ್ದ ಒಂದು ಎಂಪಿ, ಒಂದು ಎಂಎಲ್‍ಎ ಚುನಾವಣೆ ಎದುರಿಸಿದ್ದೇನೆ. ಮುಂಬರುವ ಉಪಚುನಾವಣೆಯಲ್ಲಿ ಪಕ್ಷ ಆದೇಶ ಕೊಟ್ರೆ ಸ್ಪರ್ಧಿಸುತ್ತೇನೆ. ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ರು.
Advertisement
ರಾಮನಗರ ವಿಧಾನಸಭಾ ಕ್ಷೇತ್ರದಿಂದ ಹೆಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ರು. ಆದ್ರೆ ಇತ್ತ ಚನ್ನಪಟ್ಟಣದಲ್ಲಿಯೂ ಗೆಲುವು ಸಾಧಿಸಿದ್ದರಿಂದ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಮೊದಲು ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೆಚ್.ಲೀಲಾವತಿ ಸ್ಪರ್ಧೆ ಮಾಡಿದ್ದರು. ಚುನಾವಣೆಗೂ ಮುನ್ನವೇ ಸಿ.ಪಿ.ಯೋಗೇಶ್ವರ್ ರಾಮನಗರದತ್ತ ಒಲವು ತೋರುತ್ತಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.