ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.
Advertisement
ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.
Advertisement
ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.