ನವದೆಹಲಿ: ಅಗತ್ಯವಿದ್ದಲ್ಲಿ ಜಮ್ಮು ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಕಾಶ್ಮೀರ ಟೈಮ್ಸ್ ಸಂಪಾದಕಿ ಅನುರಾಧಾ ಭಸಿನ್, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.
Advertisement
Chief Justice of India, Ranjan Gogoi, says in Supreme Court "if requirement arises, I may visit Jammu and Kashmir" https://t.co/uiLlcRFu0X
— ANI (@ANI) September 16, 2019
Advertisement
ವಾದ ಮಂಡಿಸುವ ವೇಳೆ ಇದು ಹೈಕೋರ್ಟ್ ಮಟ್ಟದಲ್ಲಿಯೇ ಬಗೆಹರಿಯುವ ವಿಚಾರ ಎಂದು ನ್ಯಾಯಮೂರ್ತಿ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನುರಾಧಾ ಭಸಿನ್ ಪರ ವಕೀಲೆ ವೃಂದಾ ಗ್ರೋವರ್ ಬೇಗನ್, ಕಾಶ್ಮೀರದ ಕಣಿವೆಯಲ್ಲಿ ಅಂತರ್ಜಾಲ, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸಾರ್ವಜನಿಕರು ಹೈ ಕೋರ್ಟ್‍ಗೆ ಹೋಗುವುದು ಸಹ ಕಷ್ಟಕರವಾಗಿದೆ ಎಂದು ತಿಳಿಸಿದರು.
Advertisement
ನಂತರ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಎನಾಕ್ಷಿ ಗಂಗೂಲಿ, ಪ್ರೊ.ಶಾಂತಾ ಸಿನ್ಹಾ ಪರ ವಕೀಲರು ವಾದ ಮಂಡಿಸಿ, 18 ವರ್ಷದೊಳಗಿನ ಮಕ್ಕಳು ಹಾಗೂ ಯುವಕರನ್ನು ಬಂಧಿಸಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು. ಆಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರತಿಕ್ರಿಯಿಸಿ, ಅರ್ಜಿದಾರರು ಹೈ ಕೋರ್ಟ್ ಮೊರೆಯೇ ಹೋಗಬೇಕು ಎಂದು ತಿಳಿಸಿದರು.
Advertisement
ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಪರ ವಕೀಲರು ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿರುವುದರಿಂದ ಹೈ ಕೋರ್ಟ್ ಮೊರೆ ಹೋಗಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
ತಕ್ಷಣ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ಜಮ್ಮು ಕಾಶ್ಮೀರದ ಹೈಕೋರ್ಟ್ ಪ್ರವೇಶಿಸಲು ಸಹ ತೊಂದರೆಗಳಿವೆ ಎಂಬ ಮಕ್ಕಳ ಹಕ್ಕುಗಳ ಕಾರ್ಯಕರ್ತರ ಆರೋಪಗಳು ನಿಜವೇ ಎಂದು ಪರಿಶೀಲಿಸಿದರು. ಅಲ್ಲದೆ, ಜಮ್ಮು ಕಾಶ್ಮೀರ ಹೈ ಕೋರ್ಟ್‍ಗೆ ಹೋಗುವುದು ಏಕೆ ಕಷ್ಟ? ಯಾರಾದರೂ ದಾರಿಯಲ್ಲಿ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದರು. ಮುಂದುವರಿದು, ಈ ಕುರಿತು ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ವಿವರ ಪಡೆಯುತ್ತೇವೆ. ಅಗತ್ಯವಿದ್ದಲ್ಲಿ ನಾನು ಜಮ್ಮು ಕಾಶ್ಮೀರದ ಹೈ ಕೋರ್ಟ್‍ಗೆ ಹೋಗುತ್ತೇನೆ. ಆದಷ್ಟು ಬೇಗ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.