ಉಡುಪಿ: ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ ಅಂತ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಈ ಬಾರಿ ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಒಪ್ಪಿದರೆ ಎಲ್ಲವೂ ಅಂದುಕೊಂಡಂತೆ ಆದರೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಅಂತ ಹೇಳಿದರು.
Advertisement
Advertisement
ಅಲ್ಪಸಂಖ್ಯಾತರನ್ನು ಮತ್ತು ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು ಎಂದು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ. ಈಗಲೂ ಅದೇ ಹೇಳುತ್ತೇನೆ. ನಾನು ಅಂಬೇಡ್ಕರ್ ವಿರೋಧಿಯಲ್ಲ. ಎಲ್ಲಾ ಧರ್ಮ, ಜಾತಿಯವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದು ಪೇಜಾವರ ಶ್ರೀ ಹೇಳಿದರು.