ಬೆಂಗಳೂರು: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಹೆಚ್. ಕಾಂತರಾಜು ನೇತೃತ್ವದ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂತರಾಜು ಅವರ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದ ಅಂಕಿ-ಅಂಶ ಸ್ಪಷ್ಟವಾಗಿ ತಿಳಿಯಲಿದೆ ಎಂದರು. ಇದನ್ನೂ ಓದಿ: Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ವರದಿ ಸಿದ್ಧವಾಗಿತ್ತು. ರಾಜಕೀಯ ಕಾರಣಗಳಿಗಾಗಿ ವರದಿ ಸ್ವೀಕಾರವಾಗಲಿಲ್ಲ. ಈ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಂತರಾಜು ವರದಿ ಸ್ವೀಕಾರ ಮಾಡಲಿಲ್ಲ. ವರದಿ ಅನುಷ್ಠಾನದಿಂದ ಜಾತಿಗಳ ಸ್ಥಿತಿಗತಿ ಆಧರಿಸಿ ಶಿಕ್ಷಣ, ಉದ್ಯೋಗ ಸೇರಿ ನಾನಾ ವಲಯಗಳಲ್ಲಿ ಅವಕಾಶ ಮತ್ತು ಸೌಲಭ್ಯ ಸಿಗಲಿದೆ. ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ ಎಂದು ಹೇಳಿದರು.
ಸಮಾಜದ ರಾಜಕೀಯ ಪ್ರಾತಿನಿಧ್ಯಕ್ಕೆ ಪ್ರಮಾಣಿಕ ಪ್ರಯತ್ನ:
ದೇವಾಂಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಮುಖ್ಯಮಂತ್ರಿಗಳು ಉಮಾಶ್ರೀ ಅವರನ್ನು ಸಚಿವರನ್ನಾಗಿ ಮಾಡಿದ್ದರು. ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಮುಖ್ಯಮಂತ್ರಿ ಯಾರದರೂ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಮುಂದೆಯೂ ಈ ಸಮಾಜಕ್ಕೆ ರಾಜಕೀಯ ಅವಕಾಶ ಕಲ್ಪಿಸಲಿದ್ದಾರೆ ಎಂದರು. ಇದನ್ನೂ ಓದಿ: ತುಂಬಿ ಹರಿಯುತ್ತಿದ್ದ ಸೇತುವೆಯಲ್ಲೇ ಪಿಕಪ್ ಚಾಲನೆ!
ಈ ಸಮುದಾಯದ ಮೂಲ ಕಸುಬು ನೇಕಾರಿಕೆ. ಚುನಾವಣಾ ಸಂದರ್ಭದಲ್ಲಿ ನೇಕಾರರಿಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತರುತ್ತದೆ. ಯಾವುದೇ ಸಮಾಜದ ಸಂಘಟನೆ ಜತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಮುಖ್ಯ. ಆ ನಿಟ್ಟಿನಲ್ಲಿ ದೇವಾಂಗ ಸಮಾಜ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮವಾಗಿದೆ. ಶಿಕ್ಷಣದಿಂದ ಸಮಾಜ ಪ್ರಬಲವಾಗುತ್ತದೆ. ನಮ್ಮ ಪೋಷಕರು ಅನಕ್ಷರಸ್ಥರಾಗಿದ್ದರು. ನಮಗೆ ವಿದ್ಯಾಭ್ಯಾಸ ನೀಡಿದ ಪರಿಣಾಮ ನಾನು ಇಂದು ಮಂತ್ರಿಯಾಗಿ ಇಲ್ಲಿ ನಿಲ್ಲಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ, ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ನೃಪತುಂಗ ವಿಶ್ವವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಶ್ರೀನಿವಾಸ್ ಬಳ್ಳಿ, ದೇವಾಂಗ ನೌಕರರ ಸಂಘದ ಅಧ್ಯಕ್ಷ ಭಾಸ್ಕರಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Web Stories