ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ ಎಂದು ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸವಾಲೆಸೆದಿದ್ದಾರೆ.
ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ. ಗೆಲ್ಲುವುದಿರಲಿ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗಲ್ಲ. ನಿನ್ನೆ ದೇವೇಗೌಡರು ಹೇಳಿದ ಮಾತು ನನಗೆ ಬೇಸರ ತರಿಸಿದೆ ಎಂದರು. ನನ್ನ ಕ್ಷೇತ್ರದಲ್ಲಿ ಸಮಾವೇಶ ನಡೆಸಲು ಒಂದು ತಿಂಗಳಿನಿಂದ ಪ್ರಯತ್ನಪಟ್ಟಿದ್ದರು. ಆದರೆ, ನಿನ್ನೆ ನಡೆದ ಜೆಡಿಎಸ್ ಸಮಾವೇಶಕ್ಕೆ ಎಷ್ಟು ಜನ ಬಂದಿದ್ದರು ಎನ್ನುವುದು ಎಲ್ರಿಗೂ ಗೊತ್ತಿದೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ನಾನು ನನ್ನ ಸ್ವಂತ ಬಲದಿಂದ ಗೆದ್ದಿದ್ದೇನೆ ಎಂದರು.
Advertisement
Advertisement
ದೇವೇಗೌಡರ ಬಗ್ಗೆ ತುಂಬಾ ಗೌರವವಿದೆ. ಆದರೆ, ಈ ರೀತಿ ರಾಜಕೀಯ ಮಾಡ್ತಾರೆ ಅಂತಾ ಅಂದ್ಕೊಂಡಿರಲಿಲ್ಲ. ನಾನು ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಜಮೀರ್ ಅಹ್ಮದ್ ಮುಖ ನೋಡಿ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ಹಾಕಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜನ ನನ್ನನ್ನು ಇಷ್ಟಪಡುತ್ತಾರೆ ದೇವೇಗೌಡರನ್ನಲ್ಲ. ಎಲ್ಲ ಸಮುದಾಯದ ಜನರು ಜಮೀರ್ ನಮ್ಮ ಮನೆಯ ಮಗ ಎಂದು ಭಾವಿಸಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
Advertisement
ನಿನ್ನೆ ಸಮಾವೇಶದಲ್ಲಿ ಏನಾಗಿತ್ತು..?: ಚಾಮರಾಜಪೇಟೆ ಕಸ್ತೂರಿಬಾ ನಗರದ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿನ್ನೆ ಜೆಡಿಎಸ್ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ದೇವೇಗೌಡರು ಬಂಡಾಯ ಶಾಸಕರಿಗೆ ಸವಾಲ್ ಹಾಕಿದ್ದರು. ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಎಲ್ಲಾ 8 ಕ್ಷೇತ್ರಗಳಲ್ಲಿ ನೋಡುತ್ತೇನೆ. ನನ್ನ ಕಾರ್ಯಕರ್ತರಿಗೆ ಈ ಕ್ಷೇತ್ರದಲ್ಲಿ ತೊಂದರೆ ಕೊಟ್ರೆ ಸಿದ್ದರಾಮಯ್ಯ ಅವರ ಮುಂದೆ ಧರಣಿ ಮಾಡುತ್ತೇನೆ. ನನ್ನ ಹಿಂದೆ ಬಂದ ಅಜೀಮ್, ಇಬ್ರಾಹಿಂಗೆ ನಾನು ಮೋಸ ಮಾಡಿಲ್ಲ ಎಂದಿದ್ದರು.
Advertisement
ನಾನು ಬೇರೆಯವರನ್ನು ಟೀಕೆ ಮಾಡೋದಿಲ್ಲ. ಇದರಿಂದ ನಾನು ದೊಡ್ಡವನಾಗೋದಿಲ್ಲ ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ಗೆ ಟಾಂಗ್ ನೀಡಿದ ದೇವೇಗೌಡರು, ಜಮೀರ್ ನನ್ನ ಸ್ನೇಹಿತ ಅಂದಿದ್ದರು. ಅವತ್ತು ಗಲ್ಲಿ ಗಲ್ಲಿ ಸುತ್ತಿ ಗೆಲ್ಲಿಸಿದ್ದೆ. ಇವತ್ತು ಸಭೆ ಮಾಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಕೆಲವರು ಕೇಸ್ ಹಾಕ್ತಾರೆ ಸರ್ ಅಂತ ಹೇಳಿದ್ರು. ಆದ್ರೆ ನಾನು ಬಿಡಲಿಲ್ಲ, ಸಭೆ ಮಾಡುತ್ತಿದ್ದೇನೆ ಎಂದಿದ್ದರು.