ಮೈಸೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮಹಿಳೆಯ ತೋಟದ ಮನೆಯಲ್ಲಿ ಸಿಕ್ಕಿಲ್ಲ ಎಂದು ಶಾಸಕ ಸಾರಾ ಮಹೇಶ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ (G.T Devegowda), ಶಾಸಕ ಸಾರಾ ಮಹೇಶ್ (Sara Mahesh) ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ರೇವಣ್ಣ ವಿರುದ್ಧ ಕೆ.ಆರ್. ನಗರದಲ್ಲಿ ಕೇಸ್ ದಾಖಲು ಆಗವುದಕ್ಕೆ ಮುಂಚೆಯೇ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು? ತೋಟದಲ್ಲಿ ಆ ಮಹಿಳೆ ಇದ್ದರು ಎಂಬುದರ ಒಂದು ವೀಡಿಯೋ ಯಾಕೆ ಬಂದಿಲ್ಲ?. ಅಷ್ಟಕ್ಕೂ ಸಂತ್ರಸ್ತ ಮಹಿಳೆ ತೋಟದಲ್ಲಿ ಸಿಕ್ಕಿಲ್ಲ. ಹುಣಸೂರಿನ ಕರಿಗೌಡ ರಸ್ತೆಯಲ್ಲಿರುವ ಸಂತ್ರಸ್ತೆಯ ಸಂಬಂಧಿ ಮನೆಯಿಂದ ಆಕೆಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
Advertisement
ರಾಜಗೋಪಾಲ್ ತೋಟದಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದು ಸಾಬೀತು ಮಾಡಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಈ ಕ್ಷಣವೇ ಜೆಡಿಎಸ್ ಗೂ ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು. ಇದನ್ನೂ ಓದಿ: ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್ಡಿಕೆ
Advertisement
ಪೆನ್ ಡ್ರೈವ್ ಹಂಚಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ. ಎಸ್ಐಟಿಯಲ್ಲಿ ಇರುವ ಕೆಲ ಅಧಿಕಾರಿಗಳು ಕಾಂಗ್ರೆಸ್ನ ಕೈ ಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಜೆಡಿಎಸ್ ಮುಖಂಡರನ್ನು ಹತ್ತಿಕುವ ಕೆಲಸ ಈ ಪ್ರಕರಣದ ಮೂಲಕ ಆಗ್ತಿದೆ. ಸಂತ್ರಸ್ತ ಮಹಿಳೆಯನ್ನು ಇನ್ನೂ ಯಾಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ?. ಆ ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಿರಾ?. ಎಸ್ಐಟಿ ಅಧಿಕಾರಿಗಳನ್ನು ಇಟ್ಟುಕೊಂಡು ನಮ್ಮ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
Advertisement
ಡಿಕೆಶಿ ಅಪ್ಪಣೆ ಪಡೆದು ಕಾರ್ತಿಕ್ ಪೆನ್ಡ್ರೈವ್ ಹಂಚಿಕೆ: ಇದೇ ಮಾತನಾಡಿದ ಜಿಟಿಡಿ, ಡ್ರೈವರ್ ಕಾರ್ತಿಕ್ ನನ್ನು ಹೊರ ದೇಶಕ್ಕೆ ಕಳಿಸಿದ್ದು ಕಾಂಗ್ರೆಸಿಗರು. ಡಿ.ಕೆ ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ. ಯಾರನ್ನು ಬಂಧಿಸಬೇಕು, ಯಾರನ್ನು ಎ.1 ಮಾಡಬೇಕು ಯಾರನ್ನು ಎ. 2 ಮಾಡಬೇಕು ಎಂಬ ನಿರ್ದೇಶನ ಸಿಎಂ ಹಾಗೂ ಡಿಸಿಎಂ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ಆಗಬೇಕು. ಡಿಸಿಎಂ ಈ ವಿಚಾರದಲ್ಲಿ ಸಂಪೂರ್ಣ ನೇತೃತ್ವ ವಹಿಸಿದ್ದಾರೆ. ಅವರು ಇದರಲ್ಲಿ ತಪ್ಪಿಸ್ಥರ ರೀತಿ ಕಾಣುತ್ತಿದ್ದಾರೆ. ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಸರಕಾರ ಅವರನ್ನು ವಜಾ ಮಾಡಲಿ ಎಂದು ಆಗ್ರಹಿಸಿದರು.