ಇಸ್ಲಾಮಾಬಾದ್: ಭಾರತದ (India) ವಿರುದ್ಧ ಉಗ್ರರನ್ನು ಛೂ ಬಿಡುತ್ತಿರುವ ಪಾಕಿಸ್ತಾನಕ್ಕೆ (Pakistan) ಈಗ ಅಲ್ಲಿಯೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ನಾವು ಭಾರತದ ಜೊತೆ ನಿಲ್ಲಬೇಕು ಎಂದು ಪಶ್ತೂನ್ ಮುಸ್ಲಿಮರಿಗೆ (Pashtun Muslims) ಕರೆ ನೀಡಲಾಗಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಇಸ್ಲಾಮಿಕ್ ಧರ್ಮಪ್ರಚಾರಕ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.
ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಶ್ತೂನ್ ಜನರಾದ ನಾವು ಭಾರತೀಯ ಸೈನ್ಯದೊಂದಿಗೆ ನಿಲ್ಲಬೇಕು. ಪಾಕ್ ಸೈನಿಕರು ನಮ್ಮ ಮೇಲೆ ಮೇಲೆ ದೌರ್ಜನ್ಯಗಳನ್ನು ಎಸಗಿದ್ದಾರೆ. ನಾವು ಎಂದಿಗೂ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್
ನಾನು ಜೈಲಿನಲ್ಲಿದ್ದಾಗ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೆ. ಕುರಾನ್ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ತಿಳಿಸಿದ್ದಾರೆ.
Islamic Preacher in Khyber Pakhtunkhwa of Pakistan: “If India attacks Pakistan, we Pashtun will immediately stand with the Indian Army against Pakistan Army. They have committed so many atrocities against us Pashtun, and you think we will say Zindabad for Pakistan? Never”. pic.twitter.com/GA7zi9UCJ8
— Aditya Raj Kaul (@AdityaRajKaul) May 5, 2025
ಪಾಕಿಸ್ತಾನ Vs ಪಶ್ತೂನ್- ಕಿತ್ತಾಟ ಯಾಕೆ?
ಪಶ್ತೂನ್‌ಗಳು ಇರಾನಿನ ಜನಾಂಗೀಯ ಗುಂಪಾಗಿದ್ದು ಇವರನ್ನು ಪಖ್ತೂನ್‌ಗಳು ಅಥವಾ ಪಠಾಣ್‌ಗಳು ಎಂದೂ ಕರೆಯುತ್ತಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಪಶ್ತೂನ್‌ಗಳು ಪೂರ್ವ ಇರಾನಿನ ಭಾಷೆಯಾದ ಪಾಷ್ಟೋವನ್ನು ಮಾತನಾಡುತ್ತಾರೆ. ಪಾಕ್‌ನಲ್ಲಿರುವ ಶಿಯಾ ಮುಸ್ಲಿಮರು ಈ ಬುಡಕಟ್ಟು ಜನರನ್ನು ಮುಸ್ಲಿಮರು ಎಂದು ಪರಿಗಣಿಸುವುದಿಲ್ಲ.
ಪಶ್ತೂನ್‌ಗಳು ಪಾಕಿಸ್ತಾನವನ್ನು ವಿರೋಧಿಸಲು ಮುಖ್ಯ ಕಾರಣ ಡುರಾಂಡ್ ಗಡಿ (Durand Line) ರೇಖೆ. ಪಾಕಿಸ್ತಾನ ಮತ್ತು ಅಫ್ಘಾನ್ ಮಧ್ಯೆ 2,670 ಕಿ.ಮೀ ಉದ್ದದ ಗಡಿ ರೇಖೆ ಹಾದು ಹೋಗಿದೆ. ಅಫ್ಘಾನಿಸ್ತಾನದಲ್ಲಿ (Afghanistan) ಪಶ್ತೂನ್ ಬುಡಕಟ್ಟು ಜನಸಂಖ್ಯೆಯ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತ ಪಾಕಿಸ್ತಾನದಲ್ಲೂ ಪಶ್ತೂನ್ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕೆಲ ಸಂಬಂಧಿಕರು ಅಫ್ಘಾನಿಸ್ತಾನ ಭಾಗದಲ್ಲಿದ್ದರೆ ಇನ್ನು ಕೆಲವರು ಪಾಕಿಸ್ತಾನದಲ್ಲಿದ್ದಾರೆ. ಈ ಕಾರಣಕ್ಕೆ ಅಫ್ಘಾನಿಸ್ತಾನ ಇಲ್ಲಿಯವರೆಗೆ ಅದು ಗಡಿ ರೇಖೆ ಎಂಬುದನ್ನು ಒಪ್ಪಿಕೊಂಡಿಲ್ಲ. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್!
ಇತ್ತೀಚಿನ ದಿನಗಳಲ್ಲಿ ಕಿತ್ತಾಟ ಜಾಸ್ತಿಯಾಗಲು ಕಾರಣ ಫಾಟಾ ಪ್ರ್ಯಾಂತ್ಯದ ಬಿಕ್ಕಟ್ಟು. 1947ರಲ್ಲಿ ಪಾಕಿಸ್ತಾನ ರಚನೆಯಾದ ಬಳಿಕ 2017ರವರೆಗೆ ಈ Federally Administered Tribal Areas ಎಂದು ಕರೆಸಿಕೊಳ್ಳುವ ಪ್ರದೇಶದ ನಿಯಂತ್ರಣ ಪಾಕ್ ಬಳಿ ಇರಲಿಲ್ಲ. 2018ರಲ್ಲಿ ಪಾಕ್ ಸಂಸತ್ತು ಮಸೂದೆ ಪಾಸ್ ಮಾಡಿ ಅದು ತನ್ನ ಭಾಗ ಎಂದು ಘೋಷಿಸಿತು. ಈ ಪ್ರದೇಶವನ್ನು ಖೈಬರ್ ಪಖ್ತುಂಕ್ವಾದ ಜೊತೆ ವಿಲೀನಗೊಳಿಸಿತು. ಪಾಕಿಸ್ತಾನದ ಈ ನಿರ್ಧಾರ ತಾಲಿಬಾನ್ ಮತ್ತು ಪಶ್ತೂನ್ ಜನಾಂಗದವರನ್ನು ಕೆರಳಿಸಿದ್ದು ಈ ವಿಚಾರದ ಬಗ್ಗೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ. ಹಲವು ಪಶ್ತೂನ್ ನಾಯಕರನ್ನು ಪಾಕಿಸ್ತಾನ ಬಂಧಿಸಿ ಜೈಲಿಗೆ ಅಟ್ಟಿದೆ. ಇದು ಪಶ್ತೂನ್ ಸಮುದಾಯದವರ ಸಿಟ್ಟಿಗೆ ಕಾರಣವಾಗಿದೆ.