– ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ? – ಯತೀಂದ್ರ ಕೊಟ್ಟ ಉತ್ತರವೇನು?
ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಸೈಟು ವಿಚಾರದಲ್ಲಿ ತಂದೆ, ತಾಯಿ ಇಬ್ಬರಿಗೂ ಬೇಸರ ಆಗಿದೆ. ಹಾಗಂತ ಹೆದರಿ ಕೂರುವುದಿಲ್ಲ, ಬಿಜೆಪಿ ಕುತಂತ್ರದ ವಿರುದ್ಧ ಹೋರಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ (Mysuru) ಜನಾಂದೋಲನ ಕಾರ್ಯಕ್ರಮಕ್ಕೂ ಮುನ್ನ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿರುವ ಅವರು, ನನ್ನ ತಂದೆಯ 40 ವರ್ಷದ ರಾಜಕೀಯ ಜೀವನದಲ್ಲಿ ಯಾವತ್ತೂ ಈ ರೀತಿ ಕಳಂಕ ಬಂದಿರಲಿಲ್ಲ. ವಿನಾಃಕಾರಣ ಅವರ ಹೆಸರು ಕೆಡಿಸಲು ಸುಳ್ಳು ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟು ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ? – ಸಿದ್ದರಾಮಯ್ಯ
ಬಿಜೆಪಿಯವರು ಬರೀ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಾದೇಶ ಪಡೆದು ಆಯ್ಕೆಯಾದ ಸರ್ಕಾರಗಳನ್ನ ಕೆಡವಲು ವಾಮಮಾರ್ಗಗಳನ್ನ ಅನುಸರಿಸುತ್ತಿದ್ದಾರೆ. ರಾಜ್ಯಪಾಲರನ್ನ ಬಳಸಿಕೊಳ್ಳೋದು, ಕೇಂದ್ರದ ತನಿಖಾ ಸಂಸ್ಥೆಗಳನ್ನ ಛೂ ಬಿಡುವ ಕೆಲಸ ಆಗ್ತಿದೆ. ರಾಜಕೀಯ ವಿರೋಧಿಗಳನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಯಲ್ಲ. ಬಿಜೆಪಿಯವರು ಪ್ರಜಾಪ್ರಭುತ್ವ ಕೊಲೆ ಮಾಡ್ತಿದ್ದಾರೆ. ಈ ಎಲ್ಲ ಕುತಂತ್ರಗಳನ್ನ ಜನರ ಮುಂದಿಡಲು ಜನಾಂದೋಲನ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ – ಸಿದ್ದರಾಮಯ್ಯ
ತಂದೆ-ತಾಯಿಗೆ ಬೇಸರವಾಗಿದೆ:
ರಾಜ್ಯಪಾಲರು ಅಸಾಂವಿಧಾನಿಕವಾಗಿ ನೋಟಿಸ್ ಕೊಟ್ಟ ಕಾರಣ ತಂದೆಯವರಿಗೆ ಬೇಸರವಾಗಿದೆ. ಅಲ್ಲದೇ ನಮಗೆ ನ್ಯಾಯವಾಗಿ ಬರಬೇಕಾದ ಪರಿಹಾರಕ್ಕೆ ಯಾಕೆ ಹೀಗೆ ಮಾಡ್ತಿದ್ದಾರೆ? ಅಂತ ನನ್ನ ತಾಯಿಗೂ ಬೇಜಾರಾಗಿದೆ. ನಾವು ಕೋರ್ಟ್‌ನಲ್ಲಿ ಹೋರಾಡಿ ಧಕ್ಕಿಸಿಕೊಳ್ಳೋಣ ಅಂತ ತಂದೆಯವರು ಹೇಳಿದ್ದಾರೆ. ಈಗಾಗಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ಅಕ್ರಮ ನಡೆದಿದ್ದರೆ ಸೈಟು ವಾಪಸ್ ತೆಗೆದುಕೊಳ್ಳಲಿ ಎಂದು ಯತೀಂದ್ರ ಸವಾಲು ಹಾಕಿದ್ದಾರೆ.
ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ?
ಇದೇ ವೇಳೆ, ನಿಮ್ಮ ಕುಟುಂಬದ ಒಟ್ಟು ಆಸ್ತಿ ಎಷ್ಟಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಯತೀಂದ್ರ, ಒಟ್ಟು ಆಸ್ತಿ ವಿವರ ಬೇಕಿದ್ದರೆ, ಚುನಾವಣಾ ವೇಳೆ ಆಯೋಗಕ್ಕೆ ವರದಿ ಕೊಟ್ಟಿದ್ದೇವೆ. ಅದರಲ್ಲಿ ಸಂಪೂರ್ಣ ಆಸ್ತಿ ವಿವರ ಇದೆ. ಅಲ್ಲಿಂದಲೇ ಮಾಹಿತಿ ಪಡೆದುಕೊಳ್ಳಬಹುದು. ಈಗ ಕೇಳಿದ್ರೆ ಒಂದು ಹೇಳಬಹುದು, ಒಂದು ಬಿಡಬಹುದು ಹಾಗಾಗಿ ಅಲ್ಲಿಂದ ಮಾಹಿತಿ ಪಡೆದುಕೊಳ್ಳಿ ಎಂದು ಉತ್ತರಿಸಿದರು. ಇದನ್ನೂ ಓದಿ: EXCLUSIVE: ನಿಜವಾಗಿಯೂ ನಮ್ಮ ಬಳಿ ಮೈಸೂರಲ್ಲಿ ಒಂದೇ ಒಂದು ಸೈಟ್ ಇದೆಯಷ್ಟೆ: ಸಿದ್ದರಾಮಯ್ಯ