ಹಾಸನ: ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಈಗ ಮಸೂದೆ ತರುವ ಅವಶ್ಯಕತೆ ಇದೆಯೇ? ಕೆಲವರು ಒಳ್ಳೆಯ ವೈದ್ಯರಿದ್ದಾರೆ. ಕೆಲವರು ಕೆಟ್ಟವರೂ ಇದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುವುದಿಲ್ಲ ಎಂದು ಹೇಳಿದರು.
Advertisement
ವೈದ್ಯರಿಗೆ ವಕೀಲರ ನೇಮಕಕ್ಕೂ ಅವಕಾಶ ಇಲ್ಲದಂತಹ ಹೊಸ ಕಾನೂನು ಬೇಕಾ? ಸಾಲ ಮಾಡಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಅದೆಲ್ಲವನ್ನು ದುಡಿಯಬೇಕಲ್ಲವೆ ಎಂದು ಪ್ರಶ್ನಿಸಿದರು. ಔಷಧಿ ಕಂಪನಿಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇದೆ. ಕೆಲವು ಕಡೆ ಗ್ರಾಮಗಳಿಗೆ ವೈದ್ಯರು ಹೋಗುವುದಕ್ಕೆ ಹೆದರುತ್ತಾರೆ. ವೈದ್ಯರಿಗೂ ಹಲವಾರು ಸಮಸ್ಯೆಗಳಿವೆ ಅವೆಲ್ಲವನ್ನೂ ಸರಿದೂಗಿಸುವ ಕಾನೂನು ಮಾಡಲಿ ಎಂದು ತಿಳಿಸಿದರು.
Advertisement
ಪಕ್ಷಾಂತರ ಆಗುತ್ತೆ: ಈಗಾಗಲೇ ಎರಡೂ ರಾಜಕೀಯ ಪಕ್ಷಗಳ ಬಗ್ಗೆ ಜನರಲ್ಲಿ ನಿರಾಸೆ ಭಾವನೆ ಇದೆ. ಗುಜರಾತ್ ಚುನಾವಣೆಯ ನಂತರ ಯಾರು ಯಾರು ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ನ ಹಲವು ನಾಯಕರು ಪಕ್ಷ ಬಿಡುವ ಸೂಚನೆ ಇದೆ. ನಾವು ವಿಕಾಸ ಯಾತ್ರೆ ಮುಖಾಂತರ ಜನರ ಬಳಿ ತಲುಪುವ ಪ್ರಯತ್ನ ಮಾಡುತಿದ್ದೇವೆ ಎಂದರು.
Advertisement
Advertisement
ಅಂಬರೀಶ್ ಪಕ್ಷ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಅವರು, ಇದೂವರೆಗೂ ನಾವು ಭೇಟಿ ಆಗಿಲ್ಲ. ಈಗಲೇ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದರೆ ಬಿಜೆಪಿಗೆ ಪಕ್ಷಾಂತರ ಆಗುತ್ತೆ. ಹಾಗೆಯೇ ಬಿಜೆಪಿಗೆ ಹಿನ್ನಡೆ ಆದಲ್ಲಿ ಕಾಂಗ್ರೆಸ್ ಕಡೆ ವಲಸೆ ನಡೆಯುವ ಸಂಭವ ಇರುತ್ತದೆ. ಗುಜರಾತ್ ನಲ್ಲಿ ಎರಡೂ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಮಾತಿಗೂ ಕೃತಿಗೂ ಬಹಳ ವ್ಯತ್ಯಾಸ ಇದೆ ಎಂದು ಹೇಳಿದರು.
ಮೌಢ್ಯ ಪ್ರತಿಬಂಧಕ ಮಸೂದೆ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಅದೆಲ್ಲ ನಂಬಿಕೆ ಮೇಲೆ ನಡೆಯುತ್ತದೆ. ಶೋಷಣೆ ನಡೆಯದಂತೆ ಕಾನೂನು ತರಲಿ ಎಂದರು.
ಶ್ರವಣಬೆಳಗೊಳದ ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಕೆಲಸಗಳು ಚೆನ್ನಾಗಿ ನಡೆಯುತ್ತಿದೆ. ಕೇಂದ್ರದ ಅನುದಾನಕ್ಕೆ ನಾನು ಪ್ರಯತ್ನಿಸಿದೆ. ಆದರೆ ನಿರ್ಲಕ್ಷ್ಯ ಮಾಡಿದ್ದು ಯಾಕೆ ಗೊತ್ತಾಗಿಲ್ಲ ಎಂದು ಹೇಳಿದರು.