ಬೆಂಗಳೂರು: ನನ್ನ ಕ್ಷೇತ್ರಕ್ಕೆ ಮಂಜೂರಾದ ಮೆಡಿಕಲ್ ಕಾಲೇಜು ರದ್ದು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ ರಾಜ್ಯ ಹಾಗೂ ಕನಕಪುರದ ಜನರ ಜೊತೆ ಇರುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಆಗಿರುವ ನಮ್ಮ ಸ್ನೇಹಿತ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಬಿಎಸ್‍ವೈ ದ್ವೇಷದ ರಾಜಕೀಯ ಮಾಡಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲಿ ಬಿಎಸ್‍ವೈ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮಾಡಿದ ಯೋಜನೆಗಳನ್ನು ರದ್ದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ: ಡಿಕೆಶಿ
ನಾನು ವೈದ್ಯಕೀಯ ಹಾಗೂ ನೀರಾವರಿ ಸಚಿವನಾಗಿ ಕೆಲಸ ಮಾಡಿದಕ್ಕೆ ಖುಷಿಯಿದೆ. ನನಗೆ ನನ್ನ ಕ್ಷೇತ್ರ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವ ಆಸೆಯಿತ್ತು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಮಾತು ಕೊಟ್ಟಿದ್ದರು ಆದರೆ ಆಗ ಕಾಲೇಜು ಸ್ಥಾಪನೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅವಕಾಶ ಕೊಟ್ಟರು. ಬಜೆಟ್ ಹಾಗೂ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಒಪ್ಪಿಗೆ ದೊರಕಿತ್ತು. ಆದರೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಿಎಸ್‍ವೈ ತಡೆ ಹಿಡಿದಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ವರ್ಗಾವಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಶನಿವಾರದ ಒಳಗೆ ರೀ ಆರ್ಡರ್ ಮಾಡಬೇಕು. ನನ್ನ ಕ್ಷೇತ್ರಕ್ಕೆ ಮಂಜೂರಾದ ಮೆಡಿಕಲ್ ಕಾಲೇಜು ರದ್ದು ಮಾಡಿರುವ ನಿರ್ಧಾರ ಕೈಬಿಡಬೇಕು. ಇಲ್ಲವಾದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ, ಸಿಎಂ ಆಫೀಸ್ ಬಳಿ ಪ್ರತಿಭಟನೆ ಮಾಡುತ್ತೇನೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಕನಕಪುರದ ಜನ ಹಾಗೂ ರಾಜ್ಯದ ಜನರ ಜೊತೆ ನಾನು ಇರುತ್ತೇನೆ. ಹಾಗೆಯೇ ಮೆಡಿಕಲ್ ಕಾಲೇಜು ರದ್ದು ಮಾಡಿದರೆ ಉಗ್ರ ರೂಪದ ಪ್ರತಿಭಟನೆ ಮಾಡೋದಾಗಿ ಡಿಕೆಶಿ ಎಚ್ಚರಿಸಿದ್ದಾರೆ.