
ನವದೆಹಲಿ: 75ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಜನರಿಗೆ ರಾಜ್ಯಸರ್ಕಾರ 25 ಲಕ್ಷ ರಾಷ್ಟ್ರೀಯ ಧ್ವಜಗಳನ್ನು ನೀಡಲು ನಿರ್ಧರಿಸಿದೆ. ಶಾಲೆ – ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ರಾಷ್ಟ್ರೀಯ ಧ್ವಜ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೆ ರಸ್ತೆ ಸಂಪರ್ಕ ಮತ್ತು ಪ್ರತಿ ಮನೆಗೆ ವಿದ್ಯುತ್ ಮತ್ತು ನೀರು ಸರಬರಾಜು ಮಾಡುವುದು ಸಹ ಮುಖ್ಯವಾಗಿದೆ. ಇದಲ್ಲದೆ ಪ್ರತಿಯೊಬ್ಬ ನಿರುದ್ಯೋಗಿ ಯುವಕರಿಗೆ ನಾವು ಗೌರವಯುತ ಉದ್ಯೋಗಾವಕಾಶ ಒದಗಿಸಬೇಕು. ಮಹಿಳೆಯರು ಅಭಿವೃದ್ಧಿ ಹೊಂದಲು ನಾವು ಈ ಸಮಾಜವನ್ನು ಸುರಕ್ಷಿತಗೊಳಿಸಬೇಕಾಗಿದೆ. ನಾವು ಇದನ್ನು ಸಾಧಿಸದ ಹೊರತು, ನಾವು ಬಲಿಷ್ಠ ರಾಷ್ಟ್ರಕ್ಕಾಗಿ ಭರವಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ
ಆಗಸ್ಟ್ 14 ರಂದು ನಗರದ ನೂರಕ್ಕೂ ಅಧಿಕ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅಂದು ಸಂಜೆ 5 ಗಂಟೆಗೆ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಮತ್ತು ಭಾರತವನ್ನು `ವಿಶ್ವದ ಅತ್ಯುತ್ತಮ ದೇಶ’ ಮಾಡುವುದಾಗಿ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.
75ನೇ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ನಗರದ ಎಲ್ಲ ಬಡಾವಣೆಗಳು, ಮೊಹಲ್ಲಾಗಳು ಸೇರಿದಂತೆ ಸ್ಲಂಗಳಲ್ಲೂ ರಾಷ್ಟ್ರಧ್ವಜವನ್ನು ವಿತರಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೂ ತ್ರಿರಂಗ ನೀಡಲಾಗುವುದು ಇದರಿಂದ ಪ್ರತಿಯೊಬ್ಬರ ಕೈಗೂ ರಾಷ್ಟ್ರಧ್ವಜ ಸಿಗಲಿದ್ದು, ಅದರೊಂದಿಗೆ ರಾಷ್ಟ್ರಗೀತೆಯನ್ನು ಹೇಳುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಸ್ವಾಮೀಜಿ ಆತ್ಮಹತ್ಯೆ – ಬಿಜೆಪಿ ಶಾಸಕ ವಿರುದ್ಧ ಆರೋಪ
ಅಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆ ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ದೆಹಲಿ ಸರ್ಕಾರ ಪ್ರತಿಯೊಬ್ಬರ ಕೈಗೂ ರಾಷ್ಟ್ರಧ್ವಜ ನೀಡುವ ಸಂಕಲ್ಪ ಮಾಡಿದೆ. 25 ಲಕ್ಷ ಬಾವುಟಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯೂ ಹಲವು ಸ್ವ-ಸಹಾಯ ಗುಂಪುಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಆಗಸ್ಟ್ 14ರ ಮುನ್ನ ಜನರ ಕೈ ತಲುಪಿಸಲು ಯೋಜನೆ ರೂಪಿಸಿದೆ ಎಂದು ಅವರು ಹೇಳಿದರು.
ಆದಾಗ್ಯೂ ಪ್ರತಿ ಮಗುವಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಪ್ರತಿ ನಾಗರಿಕರಿಗೆ ವಿಶ್ವ ದರ್ಜೆಯ ಆರೋಗ್ಯ ಸೇವೆ ಸಿಗದ ಹೊರತು ಭಾರತವು ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ. ಪ್ರತಿ ಮಗುವಿಗೆ ಅತ್ಯುತ್ತಮ ಶಿಕ್ಷಣವಿಲ್ಲದೆ, ನಮ್ಮ ದೇಶವು ವಿಶ್ವ ನಾಯಕನಾಗಲು ಸಾಧ್ಯವಿಲ್ಲ. ಪ್ರತಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯಿಲ್ಲದೆ, ಭಾರತವು ವಿಶ್ವದ ನಂಬರ್ ಒನ್ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.