ಧಾರವಾಡ: ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಐದು ವರ್ಷ ಸರ್ಕಾರ ನಡೆಯಬೇಕಾದರೆ, ಮಿತ್ರ ಪಕ್ಷ ಕಾಂಗ್ರೆಸ್ ಹೊಂದಾಣಿಕೆ ಹಾಗೂ ತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರ ನಡೆಸುವುದು ಕಷ್ಟವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಎಚ್ಚರಿಕೆಯ ಮಾತನ್ನು ಆಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ನನ್ನದೊಂದು ಕಿವಿ ಮಾತು. ಸಿಎಂ ಕುಮಾರಸ್ವಾಮಿ ಮುಂದೆ ದಿನಕ್ಕೊಂದು ಬೇಡಿಕೆ ಇಡುವುದು ಸರಿಯಲ್ಲ. ದಿನಕ್ಕೊಂದು ಕಾನೂನು ಮಾಡುವುದು ಸರಿಯಲ್ಲ. ಕಾಂಗ್ರೆಸ್ ನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಮುಖ್ಯಮಂತ್ರಿ ರಾಜ್ಯದ ರಾಜ್ಯಭಾರ ಮಾಡಬೇಕು. ಆದರೆ ಪ್ರತಿದಿನ ತೇಪೆ ಹಚ್ಚುವ ಕೆಲಸ ಆಗುತ್ತಿದೆ. ಪ್ರತಿ ದಿನ ಹೀಗೆ ಆದ್ರೆ ರಾಜ್ಯದ ಮುಖ್ಯಮಂತ್ರಿ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದರು.
Advertisement
Advertisement
ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತದೆ ಎನ್ನುವ ಹೆದರಿಕೆಯಿಂದ ಕೈ ನಾಯಕರು ಜೆಡಿಎಸ್ ಜೊತೆ ಬೇಷರತ್ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮೈತ್ರಿ ಒಪ್ಪದಂತೆ ನಡೆದುಕೊಳ್ಳುವುದು ಸೂಕ್ತ. ಒಂದು ವೇಳೆ ಆ ರೀತಿ ನಡೆದುಕೊಳ್ಳದೆ ಇದ್ದರೆ ಐದು ವರ್ಷ ಸರ್ಕಾರ ನಡೆಸುವುದು ಕಷ್ಟ. ಕಾಂಗ್ರೆಸ್ ನವರ ಟಾರ್ಚರ್ ನಿಂದಲೇ ನಿನ್ನೆ ಸಿಎಂ ಒಂದು ವರ್ಷ ನನ್ನನ್ನು ಯಾರು ಟಚ್ ಮಾಡುವ ಹಾಗಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನವರ ಕಿರುಕುಳ ಮುಂದುವರೆದರೆ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ. ಲಿಂಗಾಯತ ಶಾಸಕರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡದೇ ನಿರ್ಲಕ್ಷ್ಯ ತೋರಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಕುಮಾರಸ್ವಾಮಿ ಆಸಕ್ತರಾಗಿದ್ದಾರೆ. ಆದರೆ ಕಾಂಗ್ರೆಸ್ ಒತ್ತಡದಿಂದಾಗಿ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಆರೋಪಿಸಿದರು.