ಲಕ್ನೋ: ವಿವಾದಾತ್ಮಕ ಹೇಳಿಕೆ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಯಾಗುತ್ತಿದ್ದಾರೆ. ಭಾರತೀಯ ಸೈನ್ಯ ‘ಮೋದಿ ಸೈನ್ಯ’, ಮುಸ್ಲಿಂ ಲೀಗ್ ‘ವೈರಸ್’ ಎಂದು ಹೇಳಿದ್ದ ಅವರು ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಅಲಿ ಮೇಲೆ ನಂಬಿಕೆ ಹೊಂದಿದ್ದಾರೆ. ಆದರೆ ನಾವು ಭಜರಂಗಬಲಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಅವರು ಅಲಿಯನ್ನು ಹೊಂದಿದ್ದರೆ, ನಾವು ಭಜರಂಗಬಲಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಓದಿ: ಯೋಗಿ ಆದಿತ್ಯನಾಥ್‍ಗೆ ಚುನಾವಣಾ ಆಯೋಗ ಎಚ್ಚರಿಕೆ
ಹಿಂದೂ ಧರ್ಮದಲ್ಲಿ ಭಜರಂಗಬಲಿ ಅಂದ್ರೆ ಹನುಮಂತ. ಮುಸ್ಲಿಂ ಧರ್ಮದಲ್ಲಿ ಅಲಿ ಅಂದ್ರೆ ಅಲ್ಲಾ. ಬಿಎಸ್‍ಪಿ ನಾಯಕಿ ಮಾಯಾವತಿ ಅವರು ಕಳೆದ ಎರಡು ಹಿಂದಷ್ಟೇ, ಮುಸ್ಲಿಂ ಸಮುದಾಯದ ಬಳಿ ಮತಯಾಚನೆ ಮಾಡಿದ್ದರು. ಈ ವೇಳೆ ನೀಡಿದ ಹೇಳಿಕೆಯಿಂದ ಮಾಯಾವತಿ ಅವರು, ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾರೆ. ಮಾಯಾವತಿ ಅವರು ಮುಸ್ಲಿಮರ ಬಳಿ ಮತಯಾಚನೆ ಮಾಡಿದ್ದರಿಂದಾಗಿ ಯೋಗಿ ಆದಿತ್ಯನಾಥ್ ತಿರುಗೇಟು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಓದಿ: ರಾಹುಲ್ ಗಾಂಧಿಗೆ ಮುಸ್ಲಿಂ ಲೀಗ್ ವೈರಸ್ ತಗುಲಿದೆ: ಯೋಗಿ ಆದಿತ್ಯನಾಥ್
ಮಾಯಾವತಿ ಹೇಳಿದ್ದೇನು?:
ಉತ್ತರ ಪ್ರದೇಶದ ದಿಯೋಬಂದ್‍ನಲ್ಲಿ ಭಾನುವಾರ ನಡೆದಿದ್ದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಿಎಸ್‍ಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ್ದ ಮಾಯಾವತಿ ಅವರು, ಕಾಂಗ್ರೆಸ್ಸಿಗೆ ಮುಸ್ಲಿಮರು ಮತ ಹಾಕಬೇಡಿ. ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರು.
ಕೇಂದ್ರದ ಬಿಜೆಪಿ ಸರ್ಕಾರವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.