ಗಂಗಾವತಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ – ಸಿಎಂ

Public TV
2 Min Read
CM Siddaramaiah 2

ಕೊಪ್ಪಳ: ಜನಾರ್ದನ ರೆಡ್ಡಿ ಅನರ್ಹದಿಂದ ತೆರವಾಗಿರುವ ಸ್ಥಾನ ಗಂಗಾವತಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಕೊಪ್ಪಳ ತಾಲೂಕಿನ ಬಸಾಪೂರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಸ್ಥಾನದಿಂದ ಜನಾರ್ದನ ರೆಡ್ಡಿ ಅನರ್ಹ ಪ್ರಕರಣದ ಬಗ್ಗೆ ಮಾತನಾಡಿ, ಗಂಗಾವತಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಯಾರು ಅಭ್ಯರ್ಥಿ ಎಂದು ಪಕ್ಷ ತೀರ್ಮಾನಿಸಲಿದೆ. ನಾನು ಈ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲಾಗುವುದು ಎಂದು ಹೇಳಿದ್ದೆ. ಅದರಂತೆ ಕೋರ್ಟ್ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿಗೆ ನಾನು ಬೆಂಬಲಿಸಿದ್ದೆ ಎಂಬುದು ಸುಳ್ಳು. ನಾನು 50 ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿರೋಧಿಸಿದಷ್ಟು ಬೇರೆ ಯಾರನ್ನೂ ವಿರೋಧಿಸಿಲ್ಲ. ಬಿಜೆಪಿಯಲ್ಲಿರುವ ರೆಡ್ಡಿ ಬೆಂಬಲಿಸುವ ಅಗತ್ಯವಿಲ್ಲ ಎಂದರು.ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ- 2 ಫಲಿತಾಂಶ ಪ್ರಕಟ

ಆರ್.ಅಶೋಕ್ ಅವರ ಗ್ರೇಟರ್ ಬೆಂಗಳೂರು ಅಲ್ಲ. ಕ್ವಾರ್ಟರ್ ಬೆಂಗಳೂರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಕ್ವಾರ್ಟರ್ ಬಗ್ಗೆ ಮಾತ್ರ ಗೊತ್ತು. ಅದೇ ಅಭ್ಯಾಸ ಇರೋದು. ಅದಕ್ಕೆ ಅದನ್ನೇ ಹೇಳುತ್ತಾರೆ. ಬೆಂಗಳೂರು ವಿಭಜನೆ ಮಾಡುವ ಯೋಜನೆ ರೂಪಿಸಿದ್ದೇ ಬಿಜೆಪಿ. ಬೆಂಗಳೂರಿನಲ್ಲಿ ಬರೋಬ್ಬರಿ 1.5 ಕೋಟಿ ಜನಸಂಖ್ಯೆ ಇದೆ. ಇಂತಹ ಬೆಂಗಳೂರಿಗೆ ಒಂದೇ ಮಹಾನಗರ ಪಾಲಿಕೆಯಿಂದ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ 3 ಭಾಗವಾಗಿ ವಿಭಜನೆ ಮಾಡಿ, ಆಡಳಿತಾತ್ಮಕ ದೃಷ್ಟಿಯಿಂದ ಜನರಿಗೆ ಅನುಕೂಲ ಮಾಡುವ ಅಗತ್ಯವಿದೆ ಎಂದರು.

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ರದ್ದು ಮಾಡುವ ವಿಷಯಕ್ಕೆ ಪ್ರತಿಕ್ರಿಯಿಸಿ, ಸದ್ಯ ಕಾಮಗಾರಿ ನಿಲ್ಲಿಸಲು ಡಿಸಿಗೆ ಸೂಚಿಸಿದ್ದೇನೆ. ಕಂಪನಿ ಭೂಮಿ ಖರೀದಿ ಮಾಡಿದೆ. ನಾನು ಕಂಪನಿಗೆ ಅನುಮತಿ ನೀಡಿದ್ದೂ ನಿಜ. ಪರಿಸ್ಥಿತಿ ಅವಲೋಕಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ವರದಿ ಪಡೆದು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗೃಹಲಕ್ಷ್ಮಿ ಹಣ ನಾಲ್ಕು ತಿಂಗಳ ಬಾಕಿ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ ಎಂದು ಹೇಳಿ ಜಾರಿಕೊಂಡರು.ಇದನ್ನೂ ಓದಿ: ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?

Share This Article