– ಎಂಎಲ್‍ಎಗಳಿಗೆ ರಾಜೀನಾಮೆ ಕೊಟ್ಟು ಮತ್ತೆ ಗೆಲ್ಲುವ ಶಕ್ತಿ ಇಲ್ಲ
ಬೆಂಗಳೂರು: ಬಿಜೆಪಿಯವರು ಆಪರೇಷನ್ ಕಮಲ ಶುರು ಮಾಡಿದರೆ, ಆಪರೇಷನ್ ಹಸ್ತವೂ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ಸಿನ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಜಾವ್ಡೇಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರು ನಾವು ಏನು ಮಾಡಿಲ್ಲ. ಇದೆಲವೂ ಕಾಂಗ್ರೆಸ್ಸಿನ ಪಿತೂರಿ ಎಂದು ಹೇಳುತ್ತಾರೆ. ಆದರೆ ಅವರ ಕೇಂದ್ರ ಸಚಿವರು ಡಿಸೆಂಬರ್‍ನಲ್ಲಿ ಕರ್ನಾಟಕದಲ್ಲಿ ಧಮಾಕ ಆಗುತ್ತದೆ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಒಂದು ವೇಳೆ ಆಪರೇಷನ್ ಕಮಲ ಮಾಡಿದರೆ, ನಾವು ಕೂಡ ಆಪರೇಷನ್ ಹಸ್ತ ಮಾಡಬೇಕಾಗುತ್ತದೆ. ಒಂದು ವೇಳೆ ಅವರು ಆಪರೇಷನ್ ಕಮಲ ಮಾಡಿದರೂ, ಶಾಸಕರಿಗೆ ರಾಜೀನಾಮೆ ಕೊಟ್ಟು, ಪುನಃ ಗೆಲ್ಲುವ ಶಕ್ತಿ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕಿಂಗ್‍ಪಿನ್‍ಗಳು ದುಬೈ ಸೇರಿಕೊಂಡಿದ್ದಾರೆ. ಈಗ ಮತ್ತೆ ಅಲ್ಲಿಂದಲೇ ಪ್ಲಾನ್ ಮಾಡುತ್ತಿರಬಹುದು. ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ. ಎರಡು ಸಲ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸರ್ಕಾರ ರಚನೆಗೆ ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ಈಗ ಮತ್ತೆ ಮೂರನೇ ಸಲ ಮುಂದಾಗುತ್ತಿದ್ದಾರೆ. ಅವರು ಸುಮ್ಮನೇ ಕುಳಿತುಕೊಳ್ಳುವ ವ್ಯಕ್ತಿಯೇ ಅಲ್ಲ. ಅದಕ್ಕಾಗಿಯೇ ಅವರು ಕೇರಳಕ್ಕೆ ಹೋಗಿರಬಹುದು. ಅಲ್ಲಿ ಪೂಜೆ-ಹವನ, ಮಾಟ-ಮಂತ್ರ ಏನೇನು ಮಾಡಿಸಿದ್ದಾರೋ, ಯಾರಿಗೆ ಗೊತ್ತು. ಯಾವಾಗಲೂ ಜಿಂದಾಲ್‍ಗೆ ಹೋಗುವವರು, ಕೇರಳಕ್ಕೆ ಯಾಕೆ ಹೋದರು ಎನ್ನುವುದೇ ಅನುಮಾನವಾಗಿದೆ ಎಂದು ಹೇಳಿದರು.
Advertisement
Advertisement
ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರ 6 ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಕೇಂದ್ರದಲ್ಲಿನ ಅವರ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ಏನು ಮಾಡಿದೆ ಎನ್ನುವುದನ್ನು ಮೊದಲು ಹೇಳಲಿ. ನಮ್ಮ ಸಮ್ಮಿಶ್ರ ಸರ್ಕಾರ ರಾಜ್ಯದ ರೈತರ ಸಾಲವನ್ನು ಮನ್ನಾಮಾಡಿದೆ. ಈಗಾಗಲೇ ಹಂತ ಹಂತವಾಗಿ ಸಿಎಂ ಕುಮಾರಸ್ವಾಮಿಯವರು ಹಣ ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv