ಹಾಸನ: ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ರೆ ಜನಹಿತಕ್ಕಾಗಿ ಕೆಲಸ ಮಾಡಲಿ. ಅದನ್ನು ಬಿಟ್ಟು ಹೋಟೆಲ್‍ನಲ್ಲಿ ಮಜಾ ಮಾಡುವುದಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಮೈತ್ರಿ ಸರ್ಕಾರ ಸುಭದ್ರವಾಗಿದೆ. ರಾಜ್ಯದಲ್ಲಿ ಬರಗಾಲದಿಂದ ಜನರು ಕಷ್ಟ ಪಡುತ್ತಿದ್ದಾರೆ. ಯಡಿಯೂರಪ್ಪ ಕೇಂದ್ರ ಸರ್ಕಾರದಿಂದ ಅನುದಾನ ತಂದು ರಾಜ್ಯದ ಹಿತ ಕಾಯಲಿ. ಇಲ್ಲವಾದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ತಮಿಳುನಾಡಿನ ಪಂಚಾಂಗ ಬಂದಿದೆ, ನಮ್ದು ಬಂದ್ಮೇಲೆ ನೋಡಿ ಹೇಳ್ತೀನಿ: ರೇವಣ್ಣ ವ್ಯಂಗ್ಯ
ರಾಜ್ಯದಲ್ಲಿ ಬರಗಾಲ ಬಂದಿದೆ ಈ ಕುರಿತು ದೇವೇಗೌಡರು ಸಾಕಷ್ಟು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಯಾವುದಕ್ಕೂ ಉತ್ತರ ನೀಡಿಲ್ಲ. ಬಿಜೆಪಿಯವರಿಗೆ ಮಾನ ಮಾರ್ಯಾದೆ ಇದ್ದರೆ ಕಡತಗಳನ್ನು ತೆಗೆದು ನೋಡಲಿ ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿ ಶಾಸಕರನ್ನು ಯಡಿಯೂರಪ್ಪ ಅವರು ಹರ್ಯಾಣದ ರೆಸಾರ್ಟ್‍ನಲ್ಲಿ ಇಟ್ಟು ನೋಡಿಕೊಳ್ಳುತ್ತಿದ್ದಾರೆ. ಬೇಕಾದರೆ ಇನ್ನೂ ಸ್ವಲ್ಪ ದಿನ ಅಲ್ಲಿಯೇ ಇರಲಿ ನಮಗೇನು ಸಮಸ್ಯೆ ಇಲ್ಲ. ಆದ್ರೆ ಹೋಟೆಲ್ ನಲ್ಲಿ ಕೂತು ಮಜಾ ಮಾಡುವುದು ಅಷ್ಟೇ ಮಾಡದೇ ರಾಜ್ಯದ ಜನಹಿತಕ್ಕಾಗಿ ಕೆಲಸ ಮಾಡಲಿ ಅಂತ ರೇವಣ್ಣ ವ್ಯಂಗ್ಯವಾಡಿದರು.
ಮೈತ್ರಿ ಸರ್ಕಾರ ಬಿಟ್ಟು ಶೋಭಕ್ಕನ್ನ ಯಡಿಯೂರಪ್ಪ ಸರಿಯಾಗಿ ನೋಡಿಕೊಳ್ಳಲಿ, ಅವರಿಗೆ ಕೇಂದ್ರದಲ್ಲಿ ಸಚಿವೆ ಸ್ಥಾನ ಕೊಡಿಸಿ ರಾಜ್ಯದ ಹಿತ ಕಾಯಲಿ. ಯಡಿಯೂರಪ್ಪ ಅವರಿಗೆ ಬಿಡುವಿಲ್ಲ, ಅವರು ಶಾಸಕರನ್ನು ಕಾಯುವ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಶೋಭಾ ಕರಂದ್ಲಾಜೆ ಅವರಿಗಾದರೂ ರಾಜ್ಯದ ಹಿತ ಕಾಯುವ ಕೆಲಸ ವಹಿಸಿಕೊಡಲಿ ಅಂತ ಮೋದಿ ಹಾಗೂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv