ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರ ಜೊತೆ ಕನ್ನಡ ಚಿತ್ರರಂಗ ಕೂಡಾ ಹೋರಾಟ ಕೈಗೆತ್ತಿಕೊಳ್ಳಲು ಹಿಂಜರಿಯಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಬರದಿಂದ ತತ್ತರಿಸಿದೆ. ಬರ ಬಂದಾಗಷ್ಟೇ ಸರಕಾರ ಎಚ್ಚೆತ್ತುಕೊಳ್ಳುವುದಲ್ಲ. ಬರ ಬರದಂತೆ ತಡೆಯಲು ಸರ್ಕಾರ ಯೋಜನೆ ರೂಪಿಸಬೇಕು. ಸರ್ಕಾರ ಬರ ನಿರ್ವಹಣೆ ಮಾಡಲು ವಿಫಲವಾಗಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.
ರಾಜ್ಯದ ಯಾವುದೇ ಭಾಗದಲ್ಲಿಯೂ ತೊಂದರೆಯಾದರೆ ಎಲ್ಲರೂ ಒಗ್ಗಟನಿಂದ ಹೋರಾಟ ಮಾಡೋಣ. ಕಂಬಳಕ್ಕಾಗಿ ರಾಜ್ಯದ ಎಲ್ಲ ಕಡೆಯೂ ಹೋರಟ ನಡೆಯಿತು. ಕಂಬಳ ಕರಾವಳಿ ಜನರ ಗುರುತಾಗಿದೆ. ಕನ್ನಡ ಚಿತ್ರಗಳನ್ನು ಡಬ್ಬಿಂಗ್ ಮಾಡೋದಕ್ಕೆ ನನ್ನ ವಿರೋಧ ಬಹಳ ಹಿಂದಿನಿಂದಲೂ ಇದೆ. ಇಂದಿಗೂ ನಾನು ಡಬ್ಬಿಂಗ್‍ನ್ನು ವಿರೋಧಿಸುತ್ತೇನೆ. ಕನ್ನಡದಲ್ಲೇ ಸಾಕಷ್ಟು ಒಳ್ಳೆಯ ಕಥೆಗಳು ಇದೆ. ಕನ್ನಡಿಗರೂ ಕನ್ನಡ ಕಥೆಗಳನ್ನು ಬೆಂಬಲಿಸುತ್ತಾರೆ ಎಂದು ಶಿವರಾಜ್ ಕುಮಾರ್ ಡಬ್ಬಿಂಗ್‍ಗೆ ವಿರೋಧ ವ್ಯಕ್ತಪಡಿಸಿದರು.
ಶಿವರಾಜ್ ಕುಮಾರ್ ತುಳು ಭಾಷೆಯ ರಾಜೇಶ್ ಬ್ರಹ್ಮಾವರ್ ನಿರ್ಮಾಣದ ಕೆಂಜ ಚೇತನ್ ಕುಮಾರ್ ನಿರ್ದೇಶನದ ಕಟಪಾಡಿಯ ಕಟ್ಟಪ್ಪ ಎನ್ನುವ ಚಿತ್ರದ ಹಾಡಿನ ಧ್ವನಿಮುದ್ರಣಕ್ಕೆ ಚಾಲನೆ ನೀಡಿದರು. ಹಾಡಿನ ಝಲಕ್ ಗುಂಗುನಿಸುತ್ತಿದ್ದಂತೆ ಶಿವಣ್ಣ ತಲೆದೂಗಿಸಿದ್ರು.